ಕಾರವಾರ : ಬಿಜೆಪಿಗಾಗಿ ಆನಂದ್ ಅಸ್ನೋಟಿಕರ್ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ ಎನ್ನುವ ಶಾಸಕಿ ರೂಪಾಲಿ ನಾಯ್ಕ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಆನಂದ್, ನಾನು ಬಿಜೆಪಿ ಅಥವಾ ಕಾಂಗ್ರೆಸ್ ಟಿಕೇಟ್ ಕೊಡಿ ಎಂದು ಯಾವ ನಾಯಕರನ್ನ ಭೇಟಿ ಮಾಡಿಲ್ಲ. ಬೇಕಾದರೆ ದೇವಸ್ಥಾನದ ಮುಂದೆ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಹಿಂದೊಮ್ಮೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜೀ ಅವರನ್ನ ಭೇಟಿ ಮಾಡಿದಾಗ ಅವರು ಕಾರವಾರ ಕ್ಷೇತ್ರದಿಂದ ರೂಪಾಲಿ ನಾಯ್ಕ ಅವರಿಗೆ ಟಿಕೇಟ್ ಕೊಡಲಾಗುವುದು. ರಾಜ್ಯದಲ್ಲಿ ಮೂರ್ನಾಲ್ಕು ಜನ ಮಾತ್ರ ಮಹಿಳಾ ಶಾಸಕರಿದ್ದು ಅವರನ್ನ ಬದಲಿಸಿ ಬೇರೆಯವರಿಗೆ ಕೊಡದ ಪರಿಸ್ಥಿತಿ ಇದೆ ಎಂದಿದ್ದರು. ನಳೀನ್ ಕುಮಾರ್ ಕಟೀಲ್ ಗಾಗಲಿ ಅಥವಾ ಬೇರೆ ಯಾವುದೇ ನಾಯಕರಿಗಾಗಲಿ ಟಿಕೇಟ್ ಕೊಡಿ ಎಂದು ಅವರ ಬಳಿ ಹೋಗಿದನ್ನ ತೋರಿಸಿದರೆ ನಾನು ರಾಜಕೀಯ ಬಿಡಲು ಸಿದ್ದನಿದ್ದೇನೆ ಎಂದು ಅಸ್ನೋಟಿಕರ್ ಹೇಳಿದ್ದಾರೆ.
ನಾನು ದೇವರಿಗೆ ಕೈ ಮುಗಿದು ಪ್ರಾರ್ಥಿಸುತ್ತೇನೆ. ರೂಪಾಲಿ ನಾಯ್ಕ ಮಹಿಳೆ ಆಗಿದ್ದಾರೆ ಈ ಬಾರಿ ಬಿಜೆಪಿ ಟಿಕೇಟ್ ಅವರಿಗೆ ಸಿಗಲಿ ಎಂದು. ಈ ಬಗ್ಗೆ ಬೇಕಾದರೆ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷ, ರಾಜ್ಯಾಧ್ಯಕ್ಷರಿಗೂ ಅವರಿಗೆ ಬಿಜೆಪಿ ಟಿಕೇಟ್ ಕೊಡಿ ಎಂದು ಒತ್ತಾಯಿಸುತ್ತೇನೆ. ರೂಪಾಲಿ ನಾಯ್ಕರಿಗಿಂತ ನಾನು ಮೊದಲು ಬಿಜೆಪಿಯಲ್ಲಿ ಇದ್ದಿದ್ದೆ ಎನ್ನುವುದು ಅವರಿಗೆ ತಿಳಿಯಲಿ. ಅವರು ಕಾಂಗ್ರೆಸ್ ನಲ್ಲಿದ್ದು, ನಂತರ ಪಕ್ಷೇತರವಾಗಿ ತಾಲೂಕು ಪಂಚಾಯತ್ ಸದಸ್ಯರಾಗಿ, ಮತ್ತೆ ಕಾಂಗ್ರೆಸ್ ಹೋಗಿ ಈಗ ಬಿಜೆಪಿ ಬಂದಿದ್ದಾರೆ.
ಈಗಲೂ ನಾನು ಹೇಳುತ್ತೇನೆ, ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತರು, ಆರ್ ಎಸ್ ಎಸ್ ನ ಹಿರಿಯರು ನನ್ನೊಟ್ಟಿಗೆ ಇದ್ದಾರೆ ಎಂದು. ರೂಪಾಲಿ ನಾಯ್ಕ ಅವರ ಕಾರ್ಯಕ್ಕೆ ಬೇಸರಗೊಂಡಿರುವ ಕಾರ್ಯಕರ್ತರು, ನಾಯಕರುಗಳು ನನಗೆ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ. ಆನಂದ್ ಅಸ್ನೋಟಿಕರ್ ಎಜುಕೇಟೆಡ್ ಆಗಿ ಏನು ಮಾಡಿದ್ದಾರೆಂದು ರೂಪಾಲಿ ನಾಯ್ಕ ಹೇಳಿದ್ದಾರೆ. ನಾನು ಎಜುಕೇಟೆಡ್ ಆಗಿ ಇಂದಿಗೂ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯನ್ನ ನಿರರ್ಗಳವಾಗಿ ಮಾತನಾಡಬಲ್ಲೆ. ದೇಶ ವಿದೇಶದಲ್ಲಿ ಯಾವುದೇ ಮೂಲೆಯಲ್ಲಿ ನಿಂತು ಕಾರವಾರದ ಬಗ್ಗೆ ಹೇಳಬಲ್ಲೇ. ನಾನು ಎಜುಕೇಟೆಡ್ ಆಗಿದ್ದರಿಂದಲೇ ಕಾರವಾರಕ್ಕೆ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ನೀರಾವರಿ ಯೋಜನೆ ಹೀಗೆ ಹತ್ತಾರು ನೆನಪಿಡುವ ಕೆಲಸ ಮಾಡಿದ್ದು. ಇವರ ರೀತಿ ಅನ್ ಎಜುಕೇಟೆಡ್ ರೀತಿಯಲ್ಲಿ ಸದನದಲ್ಲಿ ಮಾತನಾಡಿಲ್ಲ. ರೂಪಾಲಿ ನಾಯ್ಕರಿಗೆ ತಾಳ್ಮೆಯೂ ಇಲ್ಲ, ಮಾತನಾಡುವ ಬುದ್ದಿಯೂ ಇಲ್ಲ ಎಂದು ಆನಂದ್ ವಾಗ್ದಾಳಿ ನಡೆಸಿದ್ದಾರೆ.
ಮಾಧವ ನಾಯಕ ಹಾಗೂ ನಾನು ಒಂದೇ ನಾಣ್ಯದ ಎರಡು ಮುಖ ಇದ್ದಂತೆ ಎಂದು ಹೇಳಿದ್ದಾರೆ. ಯಾವ ದೇವರ ಮುಂದೆ ಬೇಕಾದರು ಬಂದು ಪ್ರಮಾಣ ಮಾಡ್ತೀನಿ ಅವರು ನನ್ನೊಟ್ಟಿಗೆ ಸಂಪರ್ಕ ಇಲ್ಲವೆಂದು. ನನ್ನ ಮೊದಲ ಚುನಾವಣೆಯಿಂದಲೂ ನಾಲ್ಕು ಚುನಾವಣೆಯಲ್ಲಿ ಮಾಧವ ನಾಯ್ಕರೇ ನನಗೆ ಬದ್ಧ ವೈರಿಯಾಗಿದ್ದರು. ನಾನು ಬೇಕಾದರೆ ಅವರ ಸಂಪರ್ಕದಲ್ಲಿ ಇದ್ದೇನೆ ಎನ್ನುವುದಾದರೆ ಫೋನ್ ಚೆಕ್ ಮಾಡಿಕೊಳ್ಳಲಿ. ಅವರು ಹೋರಾಟ ಮಾಡುತ್ತಾ ಇದ್ದಾರೆ.
ಮೆಡಿಕಲ್ ಕಾಲೇಜಿನ ಆವರಣದಲ್ಲಿ ಯಾಕೆ ಆಸ್ಪತ್ರೆ ಕಟ್ಟಡ ತಡವಾಗಿ ಕಟ್ಟಲಾಗುತ್ತಿದೆ ಎಂದು ಬಿ.ಎಸ್.ಆರ್ ಕಂಪನಿ ಮಾಲಿಕರಿಗೆ ಕರೆ ಮಾಡಿದಾಗ ಸ್ಥಳೀಯ ಜನಪ್ರತಿನಿಧಿ ಕಮೀಷನ್ ಕೇಳಿದ್ದಾರೆ ಎಂದು ಹೇಳಿದ್ದನ್ನ ನಾನು ಹೇಳಿಕೆ ನೀಡಿದ್ದೆ. ಅದಾದ ನಂತರ ಈ ಎಲ್ಲಾ ಬೆಳವಣಿಗೆಯಾಗಿದೆ. ಇಂದಿಗೂ ಮಾಧವ ನಾಯಕ ನನಗೆ ವೈರಿಯೇ, ಆದರೆ ಮುಂದೆ ಏನಾಗುತ್ತದೆ ಅನ್ನುವುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಕ್ಷೇತ್ರದಲ್ಲಿ ಶಾಸಕಿ ರೂಪಾಲಿ ನಾಯ್ಕ ಒಂದೇ ಒಂದು ಯೋಜನೆಯನ್ನ ತಂದಿಲ್ಲ. ಕ್ರಿಕೇಟ್, ನಾಟಕ, ದಾಂಡೀಯಾ, ಜಾತ್ರೆಗಳಿಗೆ ಹಣ ಕೊಡುವುದೇ ರಾಜಕೀಯ ಎಂದು ಅಂದು ಕೊಂಡಿದ್ದಾರೆ. ಈ ರೀತಿ ಹಣ ಕೊಡುವುದಕ್ಕೆ ಎಲ್ಲಿಂದ ದುಡ್ಡು ಬಂದಿದೆ ಎಂದು ಶಾಸಕರು ಹೇಳಲಿ ಎಂದು ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.
ನಾಲ್ಕೂವರೆ ವರ್ಷದಿಂದ ಆನಂದ್ ಅಸ್ನೋಟಿಕರ್ ನಾಪತ್ತೆಯಾಗಿದ್ದು ಈಗ ಚುನಾವಣೆ ಸಂದರ್ಭದಲ್ಲಿ ಬಂದಿದ್ದಾರೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳುತ್ತಾರೆ. ನಾನು ಇಂದಿಗೂ ಕ್ಷೇತ್ರದ ಪ್ರತಿಯೊಬ್ಬರ ಸಂಪರ್ಕದಲ್ಲಿದ್ದೇನೆ. ಒಬ್ಬನೇ ಒಬ್ಬ ಕಾರ್ಯಕರ್ತನ ಫೋನ್ ರಿಸೀವ್ ಮಾಡಿಲ್ಲ ಎಂದು ಹೇಳಲಿ ಎಂದು ಆನಂದ್ ತಿರುಗೇಟು ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರ ಬಂದಾಗ ಒಂದು ವರ್ಷ ಶಾಸಕರು ಕ್ಷೇತ್ರದಿಂದ ನಾಪತ್ತೆಯಾಗಿದ್ದರು. ಕ್ಷೇತ್ರದಲ್ಲಿ ಆಗ ನಾನೇ ಕೆಲಸ ಮಾಡಿದ್ದು. ಆಸ್ಪತ್ರೆ ನಿರ್ಮಾಣಕ್ಕೆ ಕುಮಾರಸ್ವಾಮಿಯವರ ಬಳಿ ಒತ್ತಡ ಹಾಕಿ 150 ಕೋಟಿ ಹಣವನ್ನ ಬಿಡುಗಡೆ ಮಾಡಿಸಿದ್ದು. ನಂತರ ಪಾರ್ಲಿಮೆಂಟ್ ಚುನಾವಣೆ ನಿಂತಾಗ ಎಲ್ಲಾ ಕ್ಷೇತ್ರವನ್ನೂ ತಿರುಗಾಡಿದ್ದೇನೆ.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕರಿಗೆ ಮುಕ್ತವಾಗಿ ಕೆಲಸ ಮಾಡಲಿ ಎಂದು ಬಿಟ್ಟಿದ್ದೆ. ಆದರೆ ಅದೇ ತಪ್ಪಾಗಿದೆ, ಸುಮ್ಮನೇ ಪ್ರಚಾರಕ್ಕಾಗಿ ಕೆಲಸ ಮಾಡುವ ವ್ಯಕ್ತಿ ಆನಂದ್ ಅಸ್ನೋಟಿಕರ್ ಅಲ್ಲ ಎಂದು ಹೇಳಿದ್ದಾರೆ.
ಕೊರೋನಾ ಸಂದರ್ಭದಲ್ಲಿ ತಾಯಿಯ ಕಾರಣ ಹೇಳಿ ಆನಂದ್ ಅಸ್ನೋಟಿಕರ್ ಹೊರಬಂದಿಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ ಆರೋಪಿಸಿರುವುದು ನನಗೆ ಬಹಳ ನೋವಾಗಿದೆ ಎಂದು ಅಸ್ನೋಟಿಕರ್ ಹೇಳಿದರು.
ನನಗೆ ರಾಜಕೀಯಕ್ಕಿಂತ, ತಾಯಿಯೇ ಮುಖ್ಯ, ಅವರಿಗೆ ಎರಡು ಕಿಡ್ನಿ ಫೇಲೂರ್ ಆಗಿ 35 ವರ್ಷವಾಗಿದ್ದು ವಾರಕ್ಕೆ ಎರಡು ಬಾರಿ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದಾರೆ. ನನ್ನ ತಾಯಿ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದವರು. ಅವರ ಬಳಿ ಹಲವರು ಫೋನ್ ಮಾಡಿ ಕ್ಷೇತ್ರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನ ತಿಳಿಸಿದಾಗ ಅವರೇ ಸಕ್ರಿಯ ರಾಜಕಾರಣದಲ್ಲಿ ಇರುವಂತೆ ಸೂಚಿಸಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ ಅವರ ಕುಟುಂಬಕ್ಕೂ, ನನ್ನ ಕುಟುಂಬಕ್ಕೂ ಹೋಲಿಕೆ ಮಾಡಿಕೊಳ್ಳಬಾರದು. ನೆರೆ ಸಂದರ್ಭದಲ್ಲಿ ರೂಪಾಲಿ ನಾಯ್ಕ ಅವರು ವಸ್ತುಗಳನ್ನ ಕೊಡುವ ಮೊದಲು ನಾನು ಅಂಕೋಲಾದಲ್ಲಿ ಕುಮಾರಸ್ವಾಮಿ ಅವರು ಕಳಿಸಿಕೊಟ್ಟ ವಸ್ತುಗಳನ್ನ ಜನರಿಗೆ ಕೊಟ್ಟಿದ್ದೇನೆ. ನಾನು ಸದ್ಯ ಸೋತ ರಾಜಕಾರಣಿಯಾಗಿದ್ದೇನೆ. ಎಂಎಲ್‌ಎ ಆದವರು ನೆರೆ, ಕೊರೋನಾ ಸಂದರ್ಭದಲ್ಲಿ ಜನರೊಟ್ಟಿಗೆ ಇರಬೇಕಾಗಿರುತ್ತದೆ. ಸುಮ್ಮನೇ ರಾಜಕಾರಣಕ್ಕಾಗಿ ಟೀಕೆ ಮಾಡಬಾರದು ಎಂದು ಅಸ್ನೋಟಿಕರ್ ಹೇಳಿದ್ದಾರೆ.