ಶಿರಸಿ: ರೈತ ಮಹಿಳಾ ದಿನಾಚರಣೆಯ ಅಂಗವಾಗಿ ನಬಾರ್ಡ್ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ರಚಿತವಾದ ಮಧುಕೇಶ್ವರ ಭತ್ತ ಉತ್ಪಾದಕರ ಸೌಹಾರ್ದ ನಿಯಮಿತ ಮಾಳಂಜಿಯಲ್ಲಿ ಪ್ರಧಾನಮಂತ್ರಿ ಸೂಕ್ಷ್ಮ ಆಹಾರದ ಸಂಸ್ಕರಣಾ ಉದ್ಯಮಗಳ ಔಪಚಾರಿಕೀಕರಣ ಯೋಜನೆಯ ಕಾರ್ಯಾಗಾರವನ್ನು ಮಾಳಂಜಿ ಸಮಾಜ ಮಂದಿರದಲ್ಲಿ ಆಯೋಜಿಸಲಾಗಿತ್ತು.
ರಾಮಚಂದ್ರ ಗುತ್ಯಪ್ಪ ಕಬ್ಬೇರ್ ತಾವು ತಯಾರಿಸುವಂತಹ ಸಿರಿಧಾನ್ಯಗಳ ಕಷಾಯ ಪುಡಿ ಬಗ್ಗೆ ಮಾಹಿತಿ ನೀಡಿ ಕಷಾಯ ಪುಡಿಯನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಹಾಗೂ ಮಹಿಳೆಯರು ಇದರ ತಯಾರಿಕೆಯ ಮೂಲಕ ಸ್ವಂತ ಉದ್ಯೋಗ ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಸಿದರು.
ಸೆಲ್ಕೊ ಸೋಲಾರ್ ಪ್ರತಿನಿಧಿ ಸುಮಂತ ಹೆಗಡೆ ಉಪಸ್ಥಿತರಿದ್ದ ಮಹಿಳೆಯರಿಗೆ ಸೋಲಾರ್ ಉಪಕರಣಗಳ ಬಗ್ಗೆ ತಿಳಿಸಿದರು ಮತ್ತು ಸೋಲಾರ್ ಬಳಸುವುದರಿಂದ ಆಗುವ ಪ್ರಯೋಜನಗಳು ಮತ್ತು ವಿದ್ಯುತ್ ಉಳಿತಾಯದ ಮಾಹಿತಿ ನೀಡಿದರು,ಸ್ವಸಹಾಯ ಸಂಘಗಳಿಗೆ ಇರುವ ಸ್ಕೀಮ್ ಗಳ ಮಾಹಿತಿ ನೀಡಿದರು.
ಕುಮಾರಿ ನಯನಾ ನಾಯಕ ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿ PMFMEಯೋಜನೆಯ ಕುರಿತು ಯೋಜನೆಯಿಂದ ಸ್ವಸಹಾಯ ಸಂಘಗಳಿಗೆ ಆಗುವ ಪ್ರಯೋಜನಗಳು ಮತ್ತು ಸರ್ಕಾರ ಒದಗಿಸುವ ಸೌಲಭ್ಯಗಳೊಂದಿಗೆ ಅದನ್ನು ಪಡೆಯಲು ಅನುಸರಿಸುವ ಹಂತಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಮಧುಕೇಶ್ವರ ಭತ್ತ ಉತ್ಪಾದಕರ ಸೌಹಾರ್ದ ನಿಯಮಿತ ಮಾಳಂಜಿಯ ಸಹಾಯಕ ಮುಖ್ಯ ಕಾರ್ಯನಿರ್ವಾಹಕರಾದ ಸಂತೋಷ ನಾಯ್ಕ ಇವರು ಸ್ವಾಗತಿಸಿ ಈ ಎಲ್ಲಾ ಯೋಜನೆಗಳನ್ನು ಸ್ವಸಹಾಯ ಸಂಘಗಳಲ್ಲಿ ಅಳವಡಿಸಿ ಇದರ ಸದುಪಯೋಗ ಪಡೆಯಲು ತಿಳಿಸಿ ವಂದನಾರ್ಪಣೆ ಮಾಡಿದರು.