ಹೊನ್ನಾವರ: ಬೈಕ್ ಮೂಲಕ ಲಡಾಖ್‌ಗೆ ಸಂಚರಿಸಿ ಜಿಲ್ಲೆಯ ಜನರ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಫಲಕ ಹಿಡಿದು ಎಲ್ಲರ ಗಮನ ಸೆಳೆದು ತವರಿಗೆ ಮರಳಿದ ಯುವಕರಾದ ಪ್ರಮೋದ ಮೇಸ್ತ ಹಾಗೂ ಅಮಿತ್ ಮೇಸ್ತ ಅವರನ್ನು ಸ್ಥಳೀಯ ನಾಗರಿಕರು ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಪರವಾಗಿ ಪಟ್ಟಣದ ಹೃದಯ ಭಾಗವಾದ ದುರ್ಗಾಕೇರಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ದುರ್ಗಾಕೇರಿಯ ಪ್ರಮೋದ ಮೇಸ್ತ ಹಾಗೂ ಆತನ ಗೆಳೆಯ ಅಮಿತ್ ಮೇಸ್ತ ಲಡಾಖ್‌ಗೆ ಹೋಗಬೇಕೆನ್ನುವ ಕನಸನ್ನು ಇಟ್ಟುಕೊಂಡಿದ್ದರು. ತಂದೆ- ತಾಯಿ ಹಾಗೂ ಸ್ನೇಹಿತರ ಸಹಕಾರದೊಂದಿಗೆ ಹೊನ್ನಾವರದಿಂದ ಲಡಾಖ್‌ವರೆಗೆ ಬೈಕ್ ಮೇಲೆ ಪ್ರಯಾಣ ಬೆಳೆಸಿದ್ದರು. ಏತನ್ಮಧ್ಯೆ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಲವಾರು ಸಂಘಟನೆಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ಮನಗಂಡಿದ್ದರು. ಜಿಲ್ಲೆಯ ಜನರ ಬಹುಬೇಡಿಕೆಯನ್ನು ಜಗತ್ತಿನ ಅತಿ ಎತ್ತರ ಪ್ರದೇಶ ಲಡಾಖ್‌ನಲ್ಲಿ ಕನ್ನಡ ಬಾವುಟದ ಜೊತೆಗೆ ‘ನಮ್ಮ ಜಿಲ್ಲೆಗೆ ಆಸ್ಪತ್ರೆ ಬೇಕು’ ಎನ್ನುವ ಫಲಕ ಹಿಡಿದು ಎಲ್ಲರ ಗಮನ ಸೆಳೆದು ಜಿಲ್ಲೆಯ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಮ್ಮ ಪ್ರವಾಸ ಮುಗಿಸಿ ಸುರಕ್ಷಿತವಾಗಿ ಹುಟ್ಟೂರಿಗೆ ಮರಳಿದ ಯುವಕರನ್ನು ಅವರ ಪಾಲಕರು ಪಟ್ಟಣದ ಜನತೆ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸ್ವಾಗತಿಸಿ ಸನ್ಮಾನಿಸಿದರು.
ಕೋಟ್…
ತುಂಬಾ ದಿನಗಳಿಂದ ಲಡಾಖ್‌ಗೆ ಪ್ರವಾಸ ಕೈಗೊಳ್ಳುವ ಕನಸನ್ನು ಇಟ್ಟುಕೊಂಡಿದ್ದೆ. ಈ ಬಗ್ಗೆ ನಮ್ಮ ಹೆತ್ತವರ ಬಳಿ ಚರ್ಚಿಸಿದಾಗ ಅವರ ಸಹಕಾರ ಹಾಗೂ ಸ್ನೇಹಿತರ ಸಹಕಾರದೊಂದಿಗೆ ನನ್ನ ಪ್ರವಾಸ ಯಾವುದೇ ತೊಂದರೆ ಆಗದೆ ಸುರಕ್ಷಿತವಾಗಿ ಬಂದಿದ್ದೇನೆ. ಜಿಲ್ಲೆಗೆ ಬೇಕಾದ ಆಸ್ಪತ್ರೆಯ ಫಲಕ ಜಗತ್ತಿನ ಎತ್ತರದ ಪ್ರದೇಶದಲ್ಲಿ ಪ್ರದರ್ಶಿಸಿ ಜಿಲ್ಲೆಯ ನಾಗರಿಕನಾಗಿ ವಿನೂತನವಾಗಿ ಬೇಡಿಕೆ, ಪ್ರತಿಭಟನೆ ಮಾಡಿದ್ದೇನೆ. ಜೊತೆಯಲ್ಲಿ ಲಡಾಖ್‌ನ ಪ್ರವಾಸದ ಕನಸನ್ನು ಈಡೇರಿಸಿಕೊಂಡಿದ್ದೇನೆ.– ಪ್ರಮೋದ್ ಮೇಸ್ತ, ಲಡಾಖ್‌ನಿಂದ ಮರಳಿದ ಯುವಕ