ಕಾರವಾರ: ಹಿಂದಿನ ಸೋಮವಾರದ ಅಹವಾಲು ಸ್ವೀಕಾರದ ಕಾರ್ಯಕ್ರಮದಲ್ಲಿ 21 ಅರ್ಜಿಗಳು ಬಂದಿದ್ದು, ಅದರಲ್ಲಿ 19 ಅರ್ಜಿಗಳನ್ನು ಇತ್ಯರ್ಥಪಡಿಸಿ ದಾಖಲಾತಿಗಳನ್ನು ನೀಡಲಾಗಿದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.
ಸೋಮವಾರ ತಹಶೀಲ್ದಾರ ಕಚೇರಿಯಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ವಾರ ಕಡವಾಡ ಹಾಗೂ ಗೋಟೆಗಾಳಿಯ ಗೋಯರದಲ್ಲಿ ಪಡಿತರ ವಿತರಣೆ ಸಮಸ್ಯೆ ಬಂದಿದ್ದು, ಅದನ್ನು ಇತ್ಯರ್ಥಪಡಿಸಲಾಗಿದೆ. ಪಡಿತರ ವಿತರಣೆ ಮಾಡಲಾಗುತ್ತಿದೆ. ಇನ್ನೂ ಇದೇ ರೀತಿ ಬೇರೆ ಬೇರೆ ಗ್ರಾಮಗಳಲ್ಲಿ ಈ ಬಗೆಯ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಬೇಕು ಎಂದು ತಹಶೀಲ್ದಾರರಿಗೆ ಹಾಗೂ ಆಹಾರ ನಿರೀಕ್ಷಕರಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ತೊಂದರೆಯಾಗುತ್ತಿರುವುದನ್ನು ಗಮನಿಸಲಾಗಿದ್ದು, ಸರ್ವರ್ ಸಮಸ್ಯೆ ಸರಿಪಡಿಸಬೇಕು. ಜನರಿಗೆ ಯಾವ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಸೂಚಿಸಿದರು.
ಜಮೀನಿಗೆ ಸಂಬಂಧಿಸಿದ ದಾಖಲೆ, ಜಮೀನು ಮೋಜಣಿ, ಪಹಣಿ ಪತ್ರ ತಿದ್ದುಪಡಿ, ಪಟ್ಟಾಗಳ ವಿತರಣೆ ಮಾಡುವ ಮಾಹಿತಿಯನ್ನು ತಯಾರಿಯಲ್ಲಿ ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಅವರು ಸಿದ್ದಪಡಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ದೀಪಾವಳಿ ಹಬ್ಬದ ನಂತರ ನಾನೇ ಖುದ್ದಾಗಿ ಪಂಚಾಯತಿವಾರು ವಿತರಣೆ ಮಾಡುವುದಾಗಿ ಹೇಳಿದರು.
ಜನರಿಗೆ ಅಗತ್ಯವಾಗಿರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಹೊಸ ವೋಟರ್ ಐಡಿ ಕಾರ್ಡ್, ತಿದ್ದುಪಡಿಗಳನ್ನು ತ್ವರಿತವಾಗಿ ಮಾಡುವ ಕೆಲಸವಾಗಬೇಕು. ಗ್ರಾಮ ಚಾವಡಿಯಲ್ಲಿ ವಿಎಗಳು ಉಪಸ್ಥಿತರಿದ್ದು ಅಲ್ಲಿಯೇ ಸಮಸ್ಯೆ ಇತ್ಯರ್ಥಪಡಿಸಬೇಕು. ಅವರು ಇದಕ್ಕಾಗಿಯೇ ತಹಶೀಲ್ದಾರ ಕಚೇರಿಗೆ ಬರುತ್ತಾರೆ. ಜನರು ಅಲೆದಾಡುವುದನ್ನು ತಪ್ಪಿಸಿ ಸ್ಥಳದಲ್ಲಿಯೇ ನಿವಾರಣೆಯಾಗಬೇಕು ಎಂದು ಎಲ್ಲ ವಿಎಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ನಿಶ್ಚಲ ನರೋನ, ಪೌರಾಯುಕ್ತ ಆರ್.ಪಿ.ನಾಯ್ಕ, ಶಿರಸ್ತೆದಾರರು, ವಿಎಗಳು, ಸಾರ್ವಜನಿಕರು ಇದ್ದರು.