ಗೋಕರ್ಣ: ರೂಢಿಗತ ಪರಂಪರೆಯಂತೆ ಮಹಾಬಲೇಶ್ವರ ದೇವಾಲಯದ ಶುಭಕೃತ ಸಂವತಸ್ಯರದ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿ ಗಂಗಾಷ್ಟಾಮಿಯದಿನವಾದ ಮಂಗಳವಾರ ಬೆಳಗಿನಜಾವ ಸಂಪನ್ನವಾಯಿತು.
ಸೋಮವಾರ ಮಧ್ಯರಾತ್ರಿಯಲ್ಲಿ ಬಿರುದು ಬಾವಲಿ,ವಾದ್ಯಗಳೊಂದಿಗೆ ಮಹಾಬಲೇಶ್ವರ ದೇವರ ಉತ್ಸವ ಕಡಲಗುಂಟ ಸುಮಾರು 5 ಕಿ ಮೀ. ಸಾಗಿ ಗಂಗೆಕೊಳ್ಳ ಗ್ರಾಮದ ಪ್ರವೇಶಿಸಿ ನೇಸರ ಮೂಡುವ ಪೂರ್ವಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ದೇವರು ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವ ತೆರಳಿತು. (ಆ ಸಮಯದಲ್ಲಿ ಗಂಗೆ ಉದ್ಭವ ಆಗುವುದು ವಿಶೇಷವಾಗಿರುತ್ತದೆ) ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಜನರ ಸಮ್ಮುಖದಲ್ಲಿ ಅಂಬಿಗರ ಉರಿಯನ ಮನೆತನದ ಬುಧುವಂತರು ತಾಂಬೂಲ ವಿನಿಮಯದೊಂದಿಗೆ ಪೂಜಾ ವಿಧಿ-ವಿಧಾನಗಳು ನೆರವೇರಿತು. ನಂತರ ಶಿವನ ಉತ್ಸವ ಮಾರ್ಗದುದ್ದಕ್ಕೂ ಆರತಿ ಸ್ವೀಕರಿಸುತ್ತಾ ಮಧ್ಯಾಹ್ನ ದೇವಾಲಯಕ್ಕೆ ಮರಳಿತು. ವೇ. ಶಿವ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು. ಹತ್ತಾರು ಹಳ್ಳಿಗಳ ಆರಾಧ್ಯ ದೇವರಾದ ಗಂಗಾಮಾತೆಗೆ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು. ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ನೇತೃತ್ವದಲ್ಲಿ ಉತ್ಸವ ನಡೆಯಿತು.
ಅಂಬಿಗ ಸಮಾಜದ ಆರಾಧ್ಯ ದೇವತೆಯ ವಷಕ್ಕೊಮ್ಮೆ ನಡೆಯವ ಈ ವಿಶಿಷ್ಟ ಹಬ್ಬದಲ್ಲಿ ರಾಜ್ಯ ವಿವಿದೆಡೆಯಿಂದ ಮೀನುಗಾರರ ಸಮಾಜದವರು ಆಗಮಿಸಿದ್ದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ಸರಳವಾಗಿ ಆಚರಿಸಲಾಗಿತ್ತು, ಆದರೆ ಈ ವರ್ಷ ಮೊದಲಿನಂತೆ ಅದ್ದೂರಿಯಾಗಿ ನಡೆದಿದ್ದು, ಒಂದು ದಿನದ ಜಾತ್ರೆಗೆ ವಿವಿದ ಕಡೆಯಿಂದ ಬಂದ ವ್ಯಾಪರಸ್ಥರು ಉತ್ತಮ ವ್ಯಾಪಾರ ನಡೆಸಿದರೆ. ಜನರ ಭಕ್ತ ಭಾವದಿಂದ ಮಂದಿರಕ್ಕೆ ತೆರಳಿ ದರ್ಶನ ಪಡೆದ ನಂತರ ಜಾತ್ರೆ ಪೇಟೆಯಲ್ಲಿ ಖರೀದಿ ಜೋರಾಗಿ ನಡೆಸಿದರು. ಗಂಗಾಮಾತಾ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ, ಮಂದಿರದ ಆವಾರದಲ್ಲಿ ಭಕ್ತಿ ಭಜನೆ , ವಿದ್ಯುತ್ತ ದೀಪಾಲಂಕಾರ, ವಿಶೇಷ ಪೂಜೆ ಭಕ್ತರನ್ನ ಆಕರ್ಷಿಸಿತು. ಪೇಟಿಯಲ್ಲಿ ಬಗೆ, ಬಗೆಯ ಮಿಠಾಯಿ , ಸಿಹಿ ತಿನಿಸಿನ ಅಂಗಡಿ, ಆಟಿಕಗಳ ಸಾಮಾಗ್ರಿಯ ಮಳಿಗೆ ಹೀಗೆ ಜಾತ್ರೆಯ ಸಂಭ್ರಮ ಮಧ್ಯರಾತ್ರಿಯಾದರೂ ಕಡಿಮೆಯಾಗದ ಜನಸಾಗರದ ನಡುವೆ ಆಡು ಭಾಷೆಯಲ್ಲಿ ಕಂತ್ರಿ ಹಬ್ಬ ಎಂದೇ ಕರೆಯುವ ದೈವಿಕ ವಿವಾಹ ನಿಶ್ಚಿತಾರ್ಥ ಸಾಂಪ್ರದಾಯಕ ಸೊಗಡು, ಜಾನಪದೀಯ ಮೆರಗಿನೊಂದಿಗೆ ನೆರವೇರಿತು.
ವಿದೇಶಿ ಪ್ರವಾಸಿಗರು ಭಾಗಿ: ಕೋವಿಡ್ ಬಳಿಕ ಇತ್ತೀಚಿಗೆ ಇಲ್ಲಿಗೆ ಆಗಮಿಸಿದ ವಿದೇಶ ಪ್ರವಾಸಿಗರು ಗಂಗಾವಳಿಗೆ ಬಂದು ಇಲ್ಲಿ ನಡೆಯವ ಆಚರಣೆಗಳನ್ನು ತಿಳಿಯುತ್ತಾ , ದೇವರ ದರ್ಶನ ಮಾಡಿ ತೆರಳಿದರು. ಅಲ್ಲದೆ ಜಾತ್ರೆಯಲ್ಲಿ ಬಂದ ಮಾರಟಕ್ಕೆ ಬಂದ ವಿವಿಧ ವಸ್ತುಗಳನ್ನು ಖರೀದಿಸುತ್ತಾ ಸಂಭ್ರಮಿಸಿದರು.
ನಿಶ್ಚಿತಾರ್ಥದಂತೆ ವಿವಾಹ ಮಹೋತ್ಸವವು ಸೋಮವಾರ ಆಶ್ವೀಜ ಬಹುಳ ಚತುರ್ಥಿ(ಅ.24)ಯಂದು ಇಳಿ ಹೊತ್ತಿನಲ್ಲಿ ಗೋಕರ್ಣದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ಶಿವಗಂಗಾ ವಿವಾಹ ನೆರವೇರುತ್ತದೆ.