ಅಂಕೋಲಾ: ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಸರಿಯಾದ ಪರಿಹಾರ ಬಾರದಿರುವುದಕ್ಕೆ ಶಾಸಕಿ ರೂಪಾಲಿ ನಾಯ್ಕ ಸಂಬಂಧಿಸಿದ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ತಹಶೀಲ್ದಾರ ಕಚೇರಿಯಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ನಡೆದಿದೆ.
ಪ್ರತಿ ಸೋಮವಾರ ತಹಶೀಲ್ದಾರ ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಡೆಯುವ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ನೆರೆ ಹಾವಳಿಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಶಾಸಕಿ ರೂಪಾಲಿ ನಾಯ್ಕ ಬಳಿ ತಮ್ಮ ಅಳಲನ್ನು ಹೇಳಿಕೊಂಡರು. ಎ ವಿಭಾಗದಲ್ಲಿ ಬರುವ ಫಲಾನುಭವಿಯ ಹೆಸರು ಸಿ ವಿಭಾಗದಲ್ಲಿ ಸೇರಿ ಸಂತ್ರಸ್ಥರಿಗೆ ಅನ್ಯಾವಾಗಿದೆ. ಇದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿರುವುದು ಎಂದು ಕುಂಟಕಣಿಯ ಬೀರಣ್ಣ ಮತ್ತು ಹೆಬ್ಬುಳದ ಗೋವಿಂದ ಪಡ್ತಿ ದೂರನ್ನ ಸಲ್ಲಿಸಿದರು. ಎ ವಿಭಾಗದಲ್ಲಿ 5 ಲಕ್ಷ ಪರಿಹಾರ ಮೊತ್ತ ಬರಬೇಕು ಸಂಪೂರ್ಣ ಮನೆ ಕಳೆದುಕೊಂಡ ನಮಗೆ 95 ಸಾವಿರ ಪರಿಹಾರ ನೀಡಲಾಗಿದೆ. ಅಧಿಕಾರಿಗಳನ್ನು ಕೇಳಿದರೆ ಸಮರ್ಪಕ ಉತ್ತರ ನೀಡದೆ ನುಣುಚಿಕೊಳ್ಳುತ್ತಾರೆ ಎಂದು ಶಾಸಕಿಯಲ್ಲಿ ದೂರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ಬಳಿ ಶಾಸಕಿ ವಿಚಾರಿಸಿದಾಗ ಸರಿಯಾದ ಉತ್ತರ ನೀಡುವಲ್ಲಿ ಎಡವಿದ್ದಾರೆ. ತಕ್ಷಣ ಎಲ್ಲಾ ಅಧಿಕಾರಿಗಳನ್ನ ಶಾಸಕಿ ತರಾಟೆಗೆ ತೆಗೆದುಕೊಂಡರು. ಈ ಪ್ರಕರಣ ಕಂಪ್ಯೂಟರ್ ದೋಷದಿಂದ ಆಗಿದೆಯೋ ಇಲ್ಲವೆ ನಿಮ್ಮ ತಪ್ಪಿನಿಂದ ಆಗಿರುವುದೋ ಎಂದು ಪತ್ತೆ ಹಚ್ಚಿ ಸಂತ್ರಸ್ತರಿಗೆ ಅತಿ ಶೀಘ್ರದಲ್ಲಿಯೇ ಪರಿಹಾರ ಸಿಗುವ ಹಾಗೆ ಮಾಡಬೇಕು ಎಂದರು. ಬಳಿಕ ಈ ವಿಷಯದ ಕುರಿತು ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಷಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತಹ ಸಾರ್ವಜನಿಕರಿಂದ ಶಾಸಕಿ ರೂಪಾಲಿ ನಾಯ್ಕ ಅವಹಾಲನ್ನು ಸ್ವೀಕರಿಸಿದರು. ಕೆಲವು ಸಮಸ್ಯೆಗಳನ್ನು ಅಲ್ಲಿಯೇ ಇದ್ದ ಅಧಿಕಾರಿಗಳಲ್ಲಿ ಚರ್ಚಿಸಿ ಇತ್ಯರ್ಥ ಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಉದಯ ಕುಂಬಾರ, ಪುರಸಭಾ ಉಪಾಧ್ಯಕ್ಷೆ ರೇಖಾ ಗಾಂವಕರ, ಮುಖ್ಯಾಧಿಕಾರಿ ಎನ್.ಎಂ.ಮೇಸ್ತಾ, ಪಿಎಸೈ ಪ್ರವೀಣಕುಮಾರ ಸೇರಿದಂತೆ ಕಂದಾಯ ನಿರೀಕ್ಷಕರು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.