ಪಂಜಾಬ್: ಸೋಮವಾರ ತಡರಾತ್ರಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಭಾರತವನ್ನು ಪ್ರವೇಶಿಸಿದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಗಳು ಹೊಡೆದುರುಳಿಸಿದವು.
ಅಮೃತಸರದ ಛಾನಾ ಗ್ರಾಮದ ಬಳಿ ರಾತ್ರಿ 8.30ಕ್ಕೆ ಡ್ರೋನ್ ಅನ್ನು ಗಸ್ತು ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಪಡೆಗಳು ಗುರುತಿಸಿದವು ಮತ್ತು ತಕ್ಷಣ ಗುಂಡು ಹಾರಿಸಿ ಅದನ್ನು ಹೊಡೆದುರುಳಿಸಿದರು ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್ಎಫ್ ಅಧಿಕಾರಿಗಳ ಪ್ರಕಾರ, ಡ್ರೋನ್‌ನೊಂದಿಗೆ 2.5 ಕೆಜಿಯ ಎರಡು ಪ್ಯಾಕೆಟ್ ನಿಷಿದ್ಧ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದ ಕಡೆಯಿಂದ ಇಂತಹ ಅಕ್ರಮ ಯತ್ನಗಳನ್ನು ನಿರ್ವಹಿಸಲು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳ ಇನ್ಪುಟ್ ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹಂಚಿಕೊಂಡಿದೆ.
ಇದುವರೆಗೆ ಪಾಕಿಸ್ಥಾನದ 191 ಡ್ರೋನ್‌ಗಳು ಭಾರತಕ್ಕೆ ಪ್ರವೇಶಿಸಿವೆ. ಇದರಲ್ಲಿ 171 ಪಂಜಾಬ್ ಸೆಕ್ಟರ್‌ನ ಉದ್ದಕ್ಕೂ ಭಾರತ-ಪಾಕಿಸ್ತಾನ ಗಡಿಯ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿವೆ ಮತ್ತು 20 ಜಮ್ಮು ಸೆಕ್ಟರ್‌ನಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ
ಈ ವರ್ಷ ಜ. 1 ರಿಂದ ಸೆ. 15 ರ ನಡುವೆ ಹೊಡೆದುರುಳಿಸಿದ ಏಳು ಡ್ರೋನ್‌ಗಳು ಪಂಜಾಬ್‌ನ ಅಮೃತಸರ, ಫಿರೋಜ್‌ಪುರ ಮತ್ತು ಅಬೋಹರ್ ಪ್ರದೇಶಗಳಲ್ಲಿ ಕಂಡು ಬಂದಿವೆ.