ಹೊನ್ನಾವರ: ಈ ಹಿಂದೆ ಒಂದು ಸಮಾಜಕ್ಕೆ ಮತ್ತೊಂದು ಸಮಾಜವನ್ನು ಎತ್ತಿ ಕಟ್ಟಿ ರಾಜಕಾರಣ ಮಾಡುವ ಕ್ಷೇತ್ರ ಭಟ್ಕಳ- ಹೊನ್ನಾವರ ಆಗಿತ್ತು. ಇದೀಗ ಅಭಿವೃದ್ಧಿ ಮೂಲಕ ಜನರ ಪ್ರೀತಿ ಗಳಿಸಿದ್ದೇನೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಹೆರಂಗಡಿ ಪಂಚಾಯತಿ ವ್ಯಾಪ್ತಿಯ 1.55 ಕೋಟಿ ವೆಚ್ಚದ 9 ಕಾಮಗಾರಿಗೆ ಅಳ್ಳಂಕಿ ಕಾಲೇಜು ಮೈದಾನದಲ್ಲಿ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಾ ಸಮಾಜದವರು ಒಳಗೊಂಡಿರುವ ಈ ಪಂಚಾಯತಿ ಅಭಿವೃದ್ಧಿ ಕಾಣದೇ ನಿಲಕ್ಷಗೊಳಪಟ್ಟಿತ್ತು. ಇದನ್ನು ಮನಗಂಡು ಹಲವು ಯೋಜನೆಯ ಮೂಲಕ ಈ ಗ್ರಾಮ ಇಂದು ಅಭಿವೃದ್ಧಿ ಪರ್ವದತ್ತ ಸಾಗಿದೆ. ಜನರನ್ನು ಮತಕ್ಕಾಗಿ ಪ್ರೀತಿಸುವನಲ್ಲ, ಅವರ ಸಂಕಷ್ಟವನ್ನು ನನ್ನ ಅಧಿಕಾರವಧಿಯಲ್ಲಿ ದೂರ ಮಾಡಲು ಕ್ಷೇತ್ರದ ಯಾವುದೇ ಭಾಗದಲ್ಲಿ ಸಮಸ್ಯೆ ಬಂದರೂ ಮುಂದೆ ನಿಂತು ಬಗೆಹರಿಸುವ ಕಾರ್ಯ ಮಾಡುತ್ತಿದ್ದೇನೆ. 3 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿ ಮುಂದೆ ಈ ಭಾಗದಲ್ಲಿ ನಡೆಯಲಿದೆ. ಚುನಾವಣೆಗೆ 5 ತಿಂಗಳು ಇರುವಾಗ ಅನುದಾನ ನೀಡಲು ಹಿಂದೇಟು ಹಾಕುವ ಶಾಸಕ ನಾನಲ್ಲ ಎಂದು ತಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮಾವಿನಕುರ್ವಾ ಗ್ರಾ.ಪಂ. ಅಧ್ಯಕ್ಷ ಜಿ.ಜಿ.ಶಂಕರ್ ಮಾತನಾಡಿ, ಶಾಸಕರ ಕಾರ್ಯವೈಖರಿ ನೋಡುದಾದರೆ ಗ್ರಾಮಗಳ ಅಭಿವೃದ್ದಿಯಿಂದ ನಾವೆಲ್ಲ ನೋಡಬಹುದು. ಈ ಹಿಂದೆ ಬ್ಯಾನರ್‌ನಲ್ಲಿ ಅಭಿವೃದ್ಧಿ ಇತ್ತು. ಆದರೆ ಈಗ ವಾಸ್ತವಿಕತೆಯಲ್ಲಿ ನಾವು ಅಭಿವೃದ್ಧಿಯಲ್ಲಿ ನೋಡಬಹುದು. ಕೇವಲ ಮೂರು ವರ್ಷದಲ್ಲಿ ಮೂವತ್ತು ವರ್ಷದಲ್ಲಿ ಆಗದ ಕೆಲಸ ನಡೆದಿದೆ. ಹಿಂದೆಲ್ಲ ಒಂದು ಸಮುದಾಯಕ್ಕೆ ಪೂರಕವಾದ ಶಾಸಕರನ್ನು ನೋಡುತ್ತಿದ್ದೇವೆ. ಇಂದು ಎಲ್ಲ ಸಮುದಾಯದ ಶಾಸಕರನ್ನು ನಾವು ನೋಡುತ್ತಿದ್ದೇವೆ. ಕ್ಷೇತ್ರದ ಬಹುತೇಕ ಎಲ್ಲಾ ಕೆಲಸಗಳು ಆಗಿದೆ ಇಂತಹ ಶಾಸಕರನ್ನು ಉಳಿಸಿಕೊಂಡು ಮುಂದಿನ ಅವಧಿಗೆ ಆಯ್ಕೆ ಮಾಡಿ ಅವರನ್ನು ಸಚಿವರನ್ನಾಗಿಸಬೇಕಿದೆ ಎಂದರು.
ಹೆರಂಗಡಿ ಗ್ರಾ.ಪಂ.ಅಧ್ಯಕ್ಷ ಪ್ರಮೋದ ನಾಯ್ಕ ಮಾತನಾಡಿ ಈ ಹಿಂದೆ ಸಾವಿರಾರು ಕೋಟಿ ಕ್ಷೇತ್ರದೆಲ್ಲೆಡೆ ಬ್ಯಾನರ್ ಅಭಿವೃದ್ಧಿ ನೋಡುತ್ತಿದ್ದೆವು. ಆದರೆ ಇಂದು ಪುರಾವೆ ಇಟ್ಟು ಅಭಿವೃದ್ಧಿ ಕಾರ್ಯದ ಮಾಹಿತಿ ನೀಡುತ್ತಿದ್ದೇವೆ. ಶಿಕ್ಷಣ ಪ್ರೇಮಿ ಎಂದು ಮಾಜಿ ಶಾಸಕರು ಬೊಬ್ಬೆ ಹೊಡೆಯುತ್ತಿದ್ದರು. ನಮ್ಮ ಗ್ರಾ.ಪಂ. ಎಷ್ಟು ಶಿಕ್ಷಣ ಸಂಸ್ಥೆಗೆ ಅನುದಾನ ನೀಡಿದ್ದಾರೆ ಎಂದು ಉತ್ತರಿಸಲಿ. ನಮ್ಮ ಶಾಸಕರು ಅಳ್ಳಂಕಿಯಲ್ಲಿ 1 ಕೋಟಿ ವೆಚ್ಚದ ಕಾಲೇಜು ಕಟ್ಟಡ, 20 ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ನಿಲಯ, 40 ಲಕ್ಷ ವೆಚ್ಚದ ಶಾಲಾ ಕೊಠಡಿಯ ನಿರ್ಮಾಣವಾಗಿದ್ದು, ನಿಜವಾದ ಶಿಕ್ಷಣ ಪ್ರೇಮಿ ಯಾರೆಂದು ನೀವು ಊಹಿಸಿಕೊಳ್ಳಿ ಎಂದರು.
ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಯ ನಡೆಸಿದ ನೆಚ್ಚಿನ ಶಾಸಕರಿಗೆ ವೇದಿಕೆಯಲ್ಲಿ ಗ್ರಾ.ಪಂ. ವತಿಯಿಂದ ಗ್ರಾಮದ ವಿವಿಧ ಸಂಘಟನೆಯಿಂ ದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯ್ಕ, ವಿಘ್ನೇಶ್ವರ ಹೆಗಡೆ, ಮಹೇಶ ನಾಯ್ಕ, ಗ್ರಾ.ಪಂ ಉಪಾಧ್ಯಕ್ಷೆ ಭಾರತಿ ನಾಯ್ಕ, ತಾ.ಪಂ. ಇ.ಓ ಸುರೇಶ ನಾಯ್ಕ, ಪಿಡಿಓ ಉದಯ ಬಾಂದೇಕರ್, ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಹೆಗಡೆ, ಬಿಜೆಪಿ ಮುಖಂಡ ವಿನೋದ ನಾಯ್ಕ ಮಾವಿನಹೊಳೆ, ಗ್ರಾ.ಪಂ. ಸದಸ್ಯರು ಇದ್ದರು.