ಶಿರಸಿ: ಮಳೆಗಾಲ ಬಂತೆಂದರೆ ನಮ್ಮೂರ ರಸ್ತೆಗಳು ಗದ್ದೆಗಳಾಗುತ್ತಿವೆ, ಹಳ್ಳದ ಮಾದರಿಯಲ್ಲಿ ನೀರು ಹರಿದು ಕೊರಕಲು ಬೀಳುತ್ತಿವೆ. ನಮಗೊಂದು ಸರ್ವರುತು ರಸ್ತೆ ನಿರ್ಮಿಸಿಕೊಡಿ ಹೀಗೊಂದು ಅರ್ಜಿ ಬರೆದಿಟ್ಟು ದಶಮಾನೋತ್ಸವ ಕಳೆದಿದೆ. ಕಳೆದ ಹತ್ತು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇದೇ ಅರ್ಜಿ ಮತ್ತೆ ಮತ್ತೆ ಬರೆದುಕೊಟ್ಟಿದ್ದಾರೆ. ಪೆನ್ನಿನ ಶಾಯಿ ಮತ್ತು ಹಾಳೆ ಖಾಲಿಯಾಗಿದ್ದು ಮಾತ್ರ ಈ ಹಳ್ಳಿ ಜನತೆಗೆ ಸಿಕ್ಕ ಪ್ರತಿಫಲ!
ಇಲ್ಲಿಯ ಅಣಲೇಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿ ಅತ್ತಿಮುರುಡು ಗ್ರಾಮದ ಹಲವು ಹಳ್ಳಿಗಳ ಜನತೆಯ ಗೋಳು ಇದು. ಹೌದು, ಮಳೆಗಾಲದಲ್ಲಿ ಇಲ್ಲಿ ರಸ್ತೆ ಯಾವುದೋ… ನೀರಿನ ಹೊಂಡ ಯಾವುದೋ ಎಂಬ ಸ್ಥಿತಿ ಉದ್ಭವವಾಗುತ್ತದೆ. ಕಾರಿನ ಮೇಲೆ ತೆರಳಿದರೂ ಹಡಗಿನ ಮೇಲೆ ಹೋದ ಅನುಭವ ಇಲ್ಲಿ ಸಾಮಾನ್ಯ. ಮಳೆಗಾಲದ ಬಳಿಕ ಹಾಳಾದ ರಸ್ತೆ ಸರಿಪಡಿಸಿಕೊಳ್ಳಲು ಇಲ್ಲಿಯವರ ಸಮಯ ಹಾಳಾಗುತ್ತಿದೆ. ಅಷ್ಟೇ ವೇಗವಾಗಿ ರಸ್ತೆ ಮತ್ತೆ ದುಸ್ಥಿತಿ ತಲುಪಿರುತ್ತದೆ.
ಹೇರೂರಿನಿಂದ ಆರಂಭಗೊಳ್ಳುವ ರಸ್ತೆ ಹುಕ್ಲಕೈ, ಅತ್ತಿಮುರುಡು, ಕೊಚಗೇರಿ ಹರಿಜನವಾಡಾ, ಕಂಚಿಮನೆ, ಮರಗುಡಿಗದ್ದೆ, ಹುಲಿಮನೆ, ಕಿಚ್ಚಿಕೇರಿ, ಹೊಸಗದ್ದೆ ತಲುಪುತ್ತದೆ. 4 ಕಿ.ಮೀ. ಈ ರಸ್ತೆ ಇಲ್ಲಿಯವರ ಏಕೈಕ ಸಂಪರ್ಕ ಮಾರ್ಗ. ಪ್ರತಿ ದಿನ ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ತೆರಳುತ್ತಾರೆ. ಮಳೆಗಾಲದ ದಿನಗಳಲ್ಲಿ ಜನತೆಯ ಆರೋಗ್ಯ ಕೆಟ್ಟರೆ ಇದೇ ಮಾರ್ಗದಲ್ಲಿ ಸಾಗಬೇಕು. ಈ ದಾರಿಯಲ್ಲಿ ಸಾಗುವಾಗ ರೋಗಿಗಳಿಗೆ ಹೊಸ ಸಮಸ್ಯೆ ಆರಂಭವಾಗಿರುತ್ತದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳಾದ ಚಂದ್ರಶೇಖರ ಹೆಗಡೆ, ವೆಂಕಟ್ರಮಣ ಹೆಗಡೆ, ಅಣ್ಣಪ್ಪ ಗೌಡ ಇತರರು.
ಅಣಲೇಬೈಲ್ ಪಂಚಾಯಿತಿ ವ್ಯಾಪ್ತಿಯ ಉಳಿದ ರಸ್ತೆಗಳನ್ನು ಸರ್ವರುತು ರಸ್ತೆಯಾಗಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ನಮ್ಮ ರಸ್ತೆಯನ್ನು ಇದುವರೆಗೂ ಖಡೀಕರಣ ಸಹ ಮಾಡಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಮತದಾನ ಬಹಿಷ್ಕರಿಸಿದರೂ ನಿರ್ಲಕ್ಷ್ಯ: ಸರ್ವಋತು ರಸ್ತೆ ಆಗ್ರಹಕ್ಕೆ ಯಾರಿಂದಲೂ ಸ್ಪಂದನೆ ಸಿಗದಿದ್ದಾಗ ಗ್ರಾಮಸ್ಥರೆಲ್ಲ ಸೇರಿ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದರು. ಆ ವೇಳೆ ಗ್ರಾಮಕ್ಕೆ ಅಧಿಕಾರಿಗಳ ದಂಡೇ ಓಡಿಬಂದಿತ್ತು. ಸ್ವತಃ ತಹಸೀಲ್ದಾರರೂ ಆಗಮಿಸಿ ಗ್ರಾಮಸ್ಥರ ಮನ ಒಲಿಸಿದ್ದರು, ಸರ್ವಋತು ರಸ್ತೆ ಭರವಸೆ ನೀಡಿದ್ದರು. ಆದರೆ, ಈಗ ಎಲ್ಲವೂ ಅಧಿಕಾರಿಗಳಿಗೆ ಮರೆತುಹೋಗಿದೆ. ತಹಸೀಲ್ದಾರರ ಭರವಸೆ ಸಹ ನೆಲಕಚ್ಚಿದೆ. ನಮ್ಮಲ್ಲಿ ಕೇವಲ 289 ಮತಗಳಿವೆ. ಇದೇ ಕಾರಣಕ್ಕೇ ಈ ಗ್ರಾಮಗಳ ನಿರ್ಲಕ್ಷ್ಯ ಆಗಿರಬಹುದು ಎನ್ನುತ್ತಾರೆ ಕಂಚಿಮನೆಯ ಗಣಪತಿ ಹೆಗಡೆ.
ಈ ಮೊದಲು ಎರಡು ಬಾರಿ ಈ ರಸ್ತೆಗೆ ಖಡೀಕರಣಕ್ಕೆ ಹಣ ಮಂಜೂರಾಗಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಏನಾಯಿತೋ ತಿಳಿದಿಲ್ಲ, ಹಣ ಮಾತ್ರ ಬಿಡುಗಡೆ ಆಗಲೇ ಇಲ್ಲ, ಗ್ರಾಮಸ್ಥರ ಪೇಚಾಟಕ್ಕೆ ಪೂರ್ಣ ವಿರಾಮ ಬಿದ್ದಿಲ್ಲ.
ಸರ್ವರುತು ರಸ್ತೆ ಆಗದಿರುವ ಬಗ್ಗೆ ನಾವು ಯಾರ ಮೇಲೂ ಆಕ್ಷೇಪಣೆ ಮಾಡುವುದಿಲ್ಲ. ನಮ್ಮ ಬೇಡಿಕೆ ರಸ್ತೆ ಆಗಬೇಕು, ಕುಗ್ರಾಮದಂತಾಗಿರುವ ನಮ್ಮ ಗ್ರಾಮಗಳ ಸಮಸ್ಯೆ ತಪ್ಪಬೇಕು.–· ಸಂತೋಷ ಹೆಗಡೆ, ಬಾಲಚಂದ್ರ ಗೌಡ, ಅತ್ತಿಮುರುಡು ಗ್ರಾಮಸ್ಥರು