ಕಾರವಾರ: ಚುನಾವಣೆ ಮುಗಿದ ನಂತರ ನಾಪತ್ತೆಯಾಗಿ ಜನರ ಸಮಸ್ಯೆಗೆ ಸ್ಪಂದಿಸದೇ ನಾಲ್ಕುವರೆ ವರ್ಷವಾದ ನಂತರ ಚುನಾವಣೆ ಬಂದಾಗ ಬರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನನ್ನ ವಿರುದ್ಧ ಟೀಕೆ ಮಾಡುವ ನೈತಿಕತೆ ಇಲ್ಲ ಎಂದು ಶಾಸಕಿ ರೂಪಾಲಿ ನಾಯ್ಕ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಅಸ್ನೋಟಿಕರ್ ಬಿಜೆಪಿ ಸೇರಲು ಪ್ರಯತ್ನ ಮಾಡಿದ್ದರು. ಅದು ಅವರಿಗೆ ಬಾಗಿಲು ಬಂದ್ ಆಗಿದೆಯೆಂದು ಈಗ ಹಣೆಗೆ ಕುಂಕುಮ ಹಚ್ಚಿಕೊಂಡು ಕೇಸರಿ ಶಾಲು ಹಾಕಿಕೊಂಡು ರಾಜಕೀಯ ಮಾಡಲು ಬಂದಿದ್ದಾರೆ. ಅವರನ್ನ ಈ ವೇಷದಲ್ಲಿ ನೋಡಿ ಖುಷಿ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ನನಗೆ ಶಿಕ್ಷಣ ಇಲ್ಲ. ಸದನದಲ್ಲಿ ಹೇಗೆ ಮಾತನಾಡಬೇಕು ಎಂದು ಬರುವುದಿಲ್ಲ ಎಂದು ಆನಂದ್ ಅಸ್ನೋಟಿಕರ್ ಟೀಕಿಸಿದ್ದಾರೆ. ತಾನು ಎಜುಕೇಟೆಡ್ ಎಂದು ಹೇಳಿಕೊಳ್ಳುವ ಅವರು ಏನು ಮಾಡಿದ್ದಾರೆ ಎನ್ನುವುದನ್ನ ಹೇಳಲಿ. ಜನರು ಯಾರು ಏನು ಎನ್ನುವುದನ್ನ ಗುರುತು ಮಾಡುತ್ತಾರೆ. ಅವರು ಏನು ಕೆಲಸ ಮಾಡಿದ್ದಾರೆ, ನಾನು ಏನು ಮಾಡಿದ್ದೇನೆ ಎನ್ನುವುದು ಜನರಿಗೆ ತಿಳಿದಿದೆ ಎಂದಿದ್ದಾರೆ.
ನಾಲ್ಕುವರೆ ವರ್ಷಕ್ಕೊಮ್ಮೆ ಆನಂದ್ ಅಸ್ನೋಟಿಕರ್ ಬಂದು ದೆವ್ವ ಬಡಬಡಿಸಿದ ಹಾಗೆ ಮಾತನಾಡಿ ಹೋಗ್ತಾರೆ. ಕೊರೋನಾ ಸಂದರ್ಭದಲ್ಲಿ, ನೆರೆ ಸಂದರ್ಭದಲ್ಲಿ ಅವರು ಎಲ್ಲಿಗೆ ಹೋಗಿದ್ದರು ಎಂದು ಹೇಳಲಿ. ಜನರ ಸಮಸ್ಯೆಗೆ ಸ್ಪಂದಿಸಬೇಕಾಗುತ್ತದೆ ಎಂದು ಮನೆಯಲ್ಲಿ ಕುಳಿತವರು ಅವರು. ಜನರನ್ನ ನಂಬಿಸಲು ತಾಯಿ ಸೆಂಟಿಮೆಂಟ್ ಎಂದು ಹೇಳಿದರು. ನನಗೂ ಒಬ್ಬನೇ ಮಗನಿದ್ದಾನೆ. ನಾನು ಜನರ ಬಳಿ ಕೊರೋನಾ ಸಂದರ್ಭದಲ್ಲಿ ಹೋಗಿಲ್ಲವೇ. ನೆರೆ ಸಂದರ್ಭದಲ್ಲಿ ನಾನು ಏನು ಕೆಲಸ ಮಾಡಿದ್ದೇನೆ ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತು ಎಂದಿದ್ದಾರೆ.
ಆನಂದ್ ಅಸ್ನೋಟಿಕರ್ ಬಿಜೆಪಿ ತೊರೆದಾಗಲೇ ಅವರ ಜೊತೆ ಬಿಜೆಪಿಯಲ್ಲಿ ಇದ್ದವರು ಹೋಗಿದ್ದಾರೆ. ನಮ್ಮ ಜೊತೆ ನಿಷ್ಟಾವಂತವಾಗಿ ಪಕ್ಷ ಕಟ್ಟಲು ಇದ್ದವರು ನಮ್ಮೊಟ್ಟಿಗೆ ಇದ್ದಾರೆ. ಸುಮ್ಮನೇ ಜನರನ್ನ ಗೊಂದಲ ಮೂಡಿಸಲು ಮಾಜಿ ಸಚಿವರು ಬಿಜೆಪಿಗರು ತಮ್ಮೊಟ್ಟಿಗೆ ಇದ್ದಾರೆ ಎಂದು ಹೇಳುತ್ತಿದ್ದಾರೆ. ಈಗಲೂ ಬಿಜೆಪಿ ಸೇರಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಬಿಟ್ಟಿರುವ ಬಗ್ಗೆ ಪಶ್ಚಾತಾಪದ ಮಾತನಾಡಿದ್ದಾರೆ. ಇನ್ನೊಂದು ಕಡೆ ಬಿಜೆಪಿಗೆ ಟೀಕೆ ಮಾಡುತ್ತಾರೆ. ಬಿಜೆಪಿಯ ನಾಯಕರುಗಳಿಗೂ ಆನಂದ್ ಬಗ್ಗೆ ಏನೆಂದು ತಿಳಿದಿದೆ ಎಂದಿದ್ದಾರೆ.
ಮಾಜಿ ಸಚಿವರು ಮೆಡಿಕಲ್ ಕಾಲೇಜು, ನೂತನ ಆಸ್ಪತ್ರೆ ಕಟ್ಟಡವನ್ನ ತಾನೇ ತಂದಿದ್ದು ಎಂದು ಹೇಳಿಕೊಳ್ಳುತ್ತಾರ. ಜನರಿಗೆ ಯಾರ ಕಾಲದಲ್ಲಿ ಬಂದಿದ್ದು ಎನ್ನುವುದು ಗೊತ್ತಿಲ್ಲವೇ. ಹಣ ಕೊಟ್ಟರೇ ಓಟು ಹಾಕುತ್ತಾರೆ ಎನ್ನುವ ಕಾಲ ಈಗ ಹೋಗಿದೆ. ಕೆಲಸ ಮಾಡಿ ಮತವನ್ನ ಹಾಕಿಸಿಕೊಳ್ಳುವ ಕಾಲವಿದೆ. ನಾನು ಇವರ ರೀತಿ ಕೇವಲ ಚುನಾವಣೆ ಸಂದರ್ಭದಲ್ಲಿ ಬರುವ ನಾಯಕಿಯಲ್ಲ. ಜನರ ಜೊತೆ ಇದ್ದೇ ಜನರ ಸಮಸ್ಯೆಗೆ ಸ್ಪಂದಿಸುವ ನಾಯಕಿ ಎಂದು ಬೆನ್ನು ತಟ್ಟಿಕೊಂಡಿದ್ದಾರೆ.
ಮಾಧವ, ಆನಂದ ಒಂದೇ ನಾಣ್ಯದ ಎರಡು ಮುಖ: ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಳ್ಳುವ ಮಾಧವ ನಾಯಕ ಹಾಗೂ ಮಾಜಿ ಸಚಿವ ಆನಂದ ಅಸ್ನೋಟಿಕರ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ರೂಪಾಲಿ ನಾಯ್ಕ ಕಿಡಿಕಾರಿದರು.
ಬೆಳಿಗ್ಗೆ ಬಂದು ಮಾಧವ ನಾಯಕ ನನ್ನ ವಿರುದ್ಧ ಪತ್ರಿಕಾಗೋಷ್ಟಿ ನಡೆಸುತ್ತಾರೆ. ಮಧ್ಯಾಹ್ನ ಅವರ ಬೆನ್ನ ಹಿಂದೆ ಬಂದು ಅದೇ ವಿಚಾರ ಇಟ್ಟುಕೊಂಡು ಆನಂದ್ ಅಸ್ನೋಟಿಕರ್ ಪತ್ರಿಕಾಗೋಷ್ಟಿ ನಡೆಸುತ್ತಾರೆ. ನನ್ನ ವಿರುದ್ಧ ಸುಮ್ಮನೇ ಆರೋಪ ಮಾಡುವ ಅವರಿಗೆ ನಾಚಿಕೆಯಾಗಬೇಕು. ಒಂದೇ ಒಂದು ಆಧಾರ ಇಟ್ಟುಕೊಳ್ಳದೇ ನನ್ನ ಹೆಸರನ್ನ ಹಾಳು ಮಾಡಲು ಆರೋಪ ಮಾಡುತ್ತಿದ್ದಾರೆಂದರು.
ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡುವವರಿಗೆ ನಾನು ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ. ನನ್ನ ಆದಾಯದ ಬಗ್ಗೆ ಇವರು ಕೇಳುತ್ತಾರೆ. ನಾವು ಜನಪ್ರತಿನಿಧಿಗಳು. ಪ್ರತಿ ವರ್ಷ ಲೋಕಾಯುಕ್ತಕ್ಕೆ, ಆದಾಯ ತೆರಿಗೆ ಇಲಾಖೆಗೆ ಆದಾಯದ ದಾಖಲೆಗಳನ್ನ ಕೊಡುತ್ತೇವೆ. ನನ್ನ ಟಿಕೇಟ್ ತಪ್ಪಿಸಲು ಹೀಗೆ ಆರೋಪವನ್ನ ವಿನಾಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ನನ್ನ ಮಗನ ಮದುವೆ ವಿಚಾರದಲ್ಲೂ ರಾಜಕೀಯ ಮಾಡಲು ಬಂದಿದ್ದು, ಇದು ಕೆಲಮಟ್ಟದ ರಾಜಕಾರಣವಾಗಿದೆ. ಮದುವೆಗೆ ಅಧಿಕಾರಿಗಳು ಹಲವರು ಬಂದಿದ್ದರು. ಆದರೆ ನನ್ನ ಹೆಸರನ್ನ ಹಾಳು ಮಾಡಲು ಸುಮ್ಮನೇ ಯಾರ್ಯಾರೋ ಮೇಲೆ ಆರೋಪವನ್ನ ಮಾಡುತ್ತಿದ್ದು, ಜನರಿಗೆ ಇದರ ಹಿಂದಿನ ಪಿತೂರಿ ಏನೆಂದು ತಿಳಿಯುತ್ತದೆ ಎಂದರು.