ಸಿದ್ದಾಪುರ:ಪಟ್ಟಣದ ಅಡಕೆ ಭವನದಲ್ಲಿ ಅ. ಸೋಮವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಮಂಜೂರಿಯಾದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಗರ್ಭಿಣಿಯರು ಹಾಗೂ ಬಾಣಂತಿಯರು ಸರಿಯಾದ ಪೌಷ್ಟಿಕ ಆಹಾರ ಸೇವಿಸಿದರೆ ಮಾತ್ರ ಮಕ್ಕಳು ಉತ್ತಮ ಆರೋಗ್ಯದಿಂದ ಬೆಳೆಯುತ್ತಾರೆ. ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ ಅವರಿಗೆ ಸರಿಯಾದ ಪೌಷ್ಟಿಕ ಆಹಾರ ನೀಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಪೋಷಣ ಅಭಿಯಾನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ಜಾರಿಗೆ ತಂದಿದ್ದು ಅದರ ಸದುಪಯೋಗ ಆಗಬೇಕು. ಮುಖ್ಯವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಅವರ ಭವಿಷ್ಯ ಉತ್ತಮವಾಗುವ ಹಾಗೆ ಮಾಡಬೇಕು.
ಸಂಘಟಿತ ಪ್ರಯತ್ನ ಇದ್ದರೆ ಊರಿನಲ್ಲಿ ನಡೆಯಬಹುದಾದ ಸಮಾಜಘಾತುಕ ಶಕ್ತಿಗಳನ್ನು ತಡೆಯಬಹುದಾಗಿದೆ. ದುಶ್ಚಟಗಳಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನತೆ ದೂರ ಇರಬೇಕು ಎನ್ನುವ ಆಶಯ ನನ್ನದಾಗಿದ್ದು ಯಾವುದೇ ಕಾರಣಕ್ಕೂ ಅಕ್ರಮ ವ್ಯವಹಾರಿಗಳಿಗೆ ಹಾಗೂ ಅನಧಿಕೃತ ಮದ್ಯದಂಗಡಿಗಳಿಗೆ ಅವಕಾಶ ನೀಡುವುದಿಲ್ಲ. ಸಂಘಟನೆ ಹಾಗೂ ಸಮಾಜ ಜಾಗೃತವಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡಕೆ ವರ್ತಕ ಆರ್.ಎಸ್.ಹೆಗಡೆ ಹರಗಿ, ಪಪಂ ಸದಸ್ಯರಾದ ಮಾರುತಿ ನಾಯ್ಕ, ಗುರುರಾಜ ಶಾನಭಾಗ, ನಾಮ ನಿರ್ದೇಶಿತ ಸದಸ್ಯರಾದ ಮಂಜುನಾಥ ಭಟ್ಟ, ರಾಜೇಂದ್ರ ಕಿಂದ್ರಿ, ಸುರೇಶ ನಾಯ್ಕ, ತಹಸೀಲ್ದಾರ ಸಂತೋಷ ಭಂಡಾರಿ, ತಾಪಂ ಇಒ ಪ್ರಶಾಂತರಾವ್ ಇತರರು ಉಪಸ್ಥಿತರಿದ್ದರು.
ಸಿಡಿಪಿಒ ಪೂರ್ಣಿಮಾ ಆರ್. ದೊಡ್ಮನೆ ಸ್ವಾಗತಿಸಿದರು. ಲೀಲಾವತಿ ಕಾರ್ಯಕ್ರಮ ನಿರ್ವಹಿಸಿದರು.