Slide
Slide
Slide
previous arrow
next arrow

ಮನೆ ಸದಸ್ಯನಂತಿದ್ದ ಕೋತಿಮರಿಗೆ ಕಣ್ಣೀರಿನ ವಿದಾಯ ಹೇಳಿದ ಗ್ರಾಮಸ್ಥರು

300x250 AD

ದಾಂಡೇಲಿ: ಪಟ್ಟಣದ ಕಂಜರಪೇಟೆ ಗಲ್ಲಿಯಲ್ಲಿ ರೆಹೋನೆತ್ ಎನ್ನುವವರ ಮನೆಯಲ್ಲಿ ಕಳೆದ ಮೂರು ವರ್ಷದಿಂದ ಸಾಕಿ ಸಲುಹಿದ್ದ ಕೋತಿ ಮರಿಯೊಂದು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದು ಮಕ್ಕಳು, ಮನೆ ಮಂದಿ ಹಾಗೂ ಗ್ರಾಮಸ್ಥರು ಕಣ್ಣೀರ ವಿದಾಯ ಹೇಳಿದ ಘಟನೆ ನಡೆದಿದೆ.

ಮೂರು ವರ್ಷಗಳ ಹಿಂದೆ ಮಾಮೂಲಿ ಕೋತಿಯಂತೆ ಕಾಡಿನಲ್ಲಿ ತಿರುಗಾಡಿಕೊಂಡು, ಕಪಿ ಚೇಷ್ಠೆ ಮಾಡಿಕೊಂಡಿದ್ದ ಚಿಕ್ಕ ಮರಿಯು ಒಂದು ದಿನ ಮರದಿಂದ ಮರಕ್ಕೆ ಹಾರುವ ವೇಳೆ ಅಕಸ್ಮಾತ್ ಆಗಿ ಕಂಜರಪೇಟೆ ವ್ಯಾಪ್ತಿಯಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದು ಗಾಯಗೊಂಡಿತ್ತು. ಈ ವೇಳೆ ಕಂಜರಪೇಟೆ ಗ್ರಾಮಸ್ಥರು ಈ ಕೋತಿಯನ್ನ ಹಿಡಿದು, ಶುಷ್ರೂಷೆ ನೀಡಿ, ವೈದ್ಯರಿಂದ ಚಿಕಿತ್ಸೆ ಕೊಡಿಸಿ ಆರೈಕೆ ಮಾಡಿದ್ದರು.
ಕೊಂಚ ಚೇತರಿಸಿಕೊಂಡ ಬಳಿಕ ಈ ಕೋತಿ ಮರಿಯನ್ನ ಪುನಃ ಕಾಡಿನತ್ತ ಬಿಡಲಾಗಿತ್ತು. ಆದರೆ ಕಾಡಿನ ಇತರ ಕೋತಿಗಳು ಈ ಮರಿ ಕೋತಿಯನ್ನ ಸೇರಿಸಿಕೊಳ್ಳದೆ ದೂರ ಮಾಡಿದ್ದವು. ಇದರಿಂದಾಗಿ ಕೋತಿಮರಿಯು ಆರೈಕೆ ನೀಡಿದ್ದ ಕಂಜರಪೇಟೆ ಗ್ರಾಮಕ್ಕೆ ಪುನಃ ಬಂದಿತ್ತು. ಇದನ್ನು ಕಂಡ ಗ್ರಾಮದ ರೆಹೋನೆತ್, ಮರಿಯನ್ನ ಹಿಡಿದು ಮನೆಯ ಸದಸ್ಯನಂತೆ ಸಾಕಿ,ರಾಮು ಎಂಬ ಹೆಸರನ್ನು ಇಟ್ಟಿದ್ದರು. ಮನೆಯ ಮಕ್ಕಳೆಲ್ಲ ಈ ಕೋತಿಯೊಂದಿಗೆ ಸಲುಗೆಯಿಂದ, ಆಟವಾಡಿಕೊಂಡಿದ್ದರು. ಮನೆಯವರಷ್ಟೇ ಅಲ್ಲದೆ ಕಂಜರಪೇಟೆ ಗಲ್ಲಿಯಲ್ಲಿ ಓಡಾಡಿಕೊಂಡು, ಗ್ರಾಮಸ್ಥರೊಂದಿಗೆ ಅನ್ಯೋನ್ಯತೆಯಿಂದಿದ್ದ ರಾಮು, ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಅಲ್ಲದೆ ರಾಮುವುನನ್ನು ಕಂಡರೆ ಊರಿನ‌ ಮಕ್ಕಳಿಗೂ ಗ್ರಾಮಸ್ಥರಿಗೂ ಅಷ್ಟೇ ಪ್ರೀತಿ ಕೂಡ ಇತ್ತು. ರಾಮುವಿನನ್ನು ನೋಡುವುದಕ್ಕಾಗಿಯೇ ಊರಿನ‌ ಜನರು ಆಗಾಗ ಬಂದು ಹೋಗುವಷ್ಟು ಅನ್ಯೋನ್ಯತೆ ಸೃಷ್ಟಿಸಿಕೊಂಡಿದ್ದ.

300x250 AD

ಆದರೆ ಕಳೆದೆರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಮುಗೆ ಸ್ಥಳೀಯ ಪಶು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯಲು ಶಿಫಾರಸು ಮಾಡಿದ್ದರು. ಅದರಂತೆ ಹುಬ್ಬಳ್ಳಿಗೆ ತೆರಳುವ ಮಾರ್ಗಮಧ್ಯದಲ್ಲಿ ಕೋತಿ ಮರಿ ಕೊನೆಯುಸಿರೆಳೆದಿದ್ದು, ಕೋತಿ ರಾಮುವಿನ ಮೃತದೇಹವನ್ನು ಪುನಃ ಮನೆಗೆ ತಂದಾಗ ಎಲ್ಲರೂ ಕಣ್ಣೀರು ಸುರಿಸಿದ್ದಾರೆ. ಬಳಿಕ ಕೋತಿಯ ಶವಕ್ಕೆ ಹೂ, ಊದಿನಕಡ್ಡಿ ಪೂಜೆ ಮಾಡಿ ಮನೆ ಮಂದಿ, ಗ್ರಾಮಸ್ಥರು ಸೇರಿ ಭಾವುಕ ವಿದಾಯ ಹೇಳಿದ್ದಾರೆ. ಧಾರ್ಮಿಕ ವಿಧಿವಿಧಾನಗಳಂತೆ ಕೋತಿಯ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಈ ವೇಳೆ ಮಕ್ಕಳು, ಮಹಿಳೆಯರು, ಹಿರಿಯರೆನ್ನದೆ ಎಲ್ಲರೂ ಕಣ್ಣೀರು ಹಾಕಿರುವುದು ಮನಕಲಕುವಂತಿತ್ತು.

Share This
300x250 AD
300x250 AD
300x250 AD
Back to top