ಅಂಕೋಲಾ: ಮಂಜಗುಣಿ- ಗಂಗಾವಳಿ ನಡುವೆ ನಡೆಯುತ್ತಿರುವ ಸೇತುವೆ ಕಾಮಗಾರಿಯು ಸ್ಥಗಿತಗೊಂಡಿದ್ದು, ಗುತ್ತಿಗೆ ಪಡೆದ ಕಂಪನಿಯವರ ನಿರ್ಲಕ್ಷ್ಯಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ಕೆಲವು ಸಂಘಟನೆಯ ಹೆಸರನ್ನು ಹೇಳಿಕೊಂಡು ಕಂಪನಿಯ ಪರವಾಗಿ ವಕಾಲತ್ತು ವಹಿಸಿದಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ.
ಕಳೆದ 4 ವರ್ಷಗಳ ಹಿಂದೆ ಈ ಸೇತುವೆ ಕಾಮಗಾರಿ ಆರಂಭಗೊಂಡಿತ್ತು. ಆದರೆ ಇನ್ನುವರೆಗೂ ಸೇತುವೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಸೇತುವೆ ನಿರ್ಮಾಣಕ್ಕಾಗಿ ಗಂಗಾವಳಿ ನದಿಗೆ ಮಣ್ಣು ಹಾಕಿದ್ದರ ಪರಿಣಾಮ ಸತತ 3 ವರ್ಷ ಗಂಗಾವಳಿ ನದಿಗೆ ಬಾರಿ ಪ್ರವಾಹ ಉಂಟಾಗಿತ್ತು. ಇದಕ್ಕೆ ಈ ಸೇತುವೆಗೆ ಹಾಕಿದ್ದ ಮಣ್ಣು ಕೂಡ ಕಾರಣವಾಗಿತ್ತು. ಮಳೆಗಾಲ ಆರಂಭಕ್ಕೂ ಮುನ್ನ ಗಂಗಾವಳಿ ನದಿ ತಟದ ಜನರು ಸೇರಿ ಕಂಪನಿಯವರ ವಿರುದ್ಧ ಪ್ರತಿಭಟನೆ ನಡೆಸಿ ಮಣ್ಣನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು.
ಪ್ರತಿಭಟನೆಗೆ ಅಂಜಿದ ಕಂಪನಿಯವರು ನದಿಗೆ ಹಾಕಲಾಗಿದ್ದ ಮಣ್ಣನ್ನು ಹಿಟಾಚಿ ಮೂಲಕ ತೆಗೆದಿದ್ದರು. ಆದರೆ ನದಿ ಆಳದಲ್ಲಿ ಮಣ್ಣನ್ನು ಹಿಟಾಚಿ ಮೂಲಕ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಪ್ರತಿಭಟನಾಕಾರರು ಬಾರ್ಜ್ ಮೂಲಕ ಮಣ್ಣನ್ನು ತೆಗೆಯುವಂತೆ ಪ್ರತಿಭಟನೆ ನಡೆಸಿದಾಗ ಕಂಪನಿಯವರು ಮಣ್ಣನ್ನು ತೆಗೆಯಲಾಗಿದ್ದ ಮಳೆಗಾಲದ ನೀರಿನ ಒತ್ತಡಕ್ಕೆ ಉಳಿದ ಮಣ್ಣು ಕೊಚ್ಚಿಹೋಗುತ್ತದೆ ಎಂದು ಸಬೂಬು ನೀಡಿ ನುಣುಚಿಕೊಂಡಿದ್ದರು.
ಕಳೆದ 2 ದಿನಗಳ ಹಿಂದೆ ಜನರನ್ನು ದಾಟಿಸುವ ಯಾಂತ್ರಿಕೃತ ದೋಣಿ ಸೇತುವೆಗೆ ಹಾಕಿದ್ದ ಮಣ್ಣಿಗೆ ಸಿಲುಕಿದಾಗ ಮಣ್ಣು ಎಷ್ಟರ ಮಟ್ಟಿಗೆ ನೀರಿನಾಳದಲ್ಲಿ ಇರಬಹುದು ಎಂದು ತಿಳಿದು ಬಂತು. ಸ್ಥಳೀಯರು ಮತ್ತೆ ಪ್ರತಿಭಟನೆಗೆ ಇಳಿಯುತ್ತಾರೆ ಎಂದು ಹೆದರಿದ ಕಂಪನಿಯವರು ಕೆಲವು ಸಂಘಟನೆಯವರಿಗೆ ವಿಷಯ ತಿಳಿಸಿ ದೋಣಿಯಲ್ಲಿಯೇ ಹೆಚ್ಚಿನ ಜನರನ್ನು ಹಾಕಿದ್ದರಿಂದ ಈ ಸಮಸ್ಯೆ ಉಂಟಾಯಿತು ಎಂದು ಗಂಗಾವಳಿಯಲ್ಲಿ ಗದ್ದಲ ಎಬ್ಬಿಸಿದ್ದರು. ತಮ್ಮ ತಪ್ಪನ್ನು ನುಣಿಚಿಕೊಳ್ಳಲು ಕಂಪನಿಯವರು ನಾಟಕವಾಡುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.
ಮತ್ತೆ ಹೋರಾಟ: ಮಣ್ಣು ತೆಗೆದು ಶೀಘ್ರ ಸೇತುವೆ ನಿರ್ಮಾಣ ನಡೆಸದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ಅಗ್ರಗೋಣ ಗ್ರಾ.ಪಂ. ಅಧ್ಯಕ್ಷ ರಾಘವೇಂದ್ರ ಗೌಡ, ಬೆಳಸೆ ಗ್ರಾ.ಪಂ. ಅಧ್ಯಕ್ಷೆ ಆಯಮ್ಮ ಗೌಡ, ಸಗಡಗೇರಿ ಗ್ರಾ.ಪಂ. ಅಧ್ಯಕ್ಷೆ ಸೀತೆ ಗೌಡ, ವಾಸರಕುದ್ರಿಗೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ ವಾಸರೆ, ಮೊಗಟಾ ಗ್ರಾ.ಪಂ. ಅಧ್ಯಕ್ಷ ಹರೀಶ ನಾಯಕ, ಅಗಸೂರು ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ ಡಿ. ನಾಯ್ಕ, ಹಿಲ್ಲೂರು ಗ್ರಾ.ಪಂ. ಅಧ್ಯಕ್ಷ ಬೀರಣ್ಣ ನಾಯಕ, ಸುಂಕಸಾಳ ಗ್ರಾ.ಪಂ. ಅಧ್ಯಕ್ಷ ಸದಾನಂದ ನಾಯಕ ಆಗ್ರಹಿಸಿದ್ದಾರೆ.