ದಾಂಡೇಲಿ: ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ರಾಜ್ಯ ಘಟಕ ಮತ್ತು ನಗರದ ಪಾಟೀಲ್ ನರ್ಸಿಂಗ್ ಹೋಮ್ ಸಹಯೋಗದಲ್ಲಿ ನ.12 ಮತ್ತು 13ರಂದು ಪಾಟೀಲ್ ನರ್ಸಿಂಗ್ ಹೋಮ್‌ನಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ದಾಂಡೇಲಿ, ಹಳಿಯಾಳ, ಜೊಯಿಡಾ, ರಾಮನಗರ ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಬಡ ಕುಟುಂಬದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಶಿಬಿರದ ಸಂಘಟಕ ಡಾ.ಮೋಹನ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಶಿಬಿರದಲ್ಲಿ ಥೈರಾಯ್ಡ್, ಕೊಲೆಸಿಸ್ಟೆಕ್ಟಮಿ, ಅಪೆಂಡಿಸೆಕ್ಟಮಿ, ಹರ್ನಿಯಾ, ಪೈಲ್ಸ್ & ಫಿಸ್ಟುಲಾ, ವೆರಿಕೊಸ್ ವೇನ್ಸ್, ಬೆಸ್ಟ್ ಲಂಪ್ಸ್, ಪರೋಟಿಡ್ ಮತ್ತು ಪೀಡಿಯಾಟ್ರಿಕ್ ಹರ್ನಿಯಾ ಮೊದಲಾದ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಈ ಶಿಬಿರದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ವೈದ್ಯರುಗಳು ಭಾಗವಹಿಸಲಿದ್ದಾರೆ. ಶಿಬಿರದ ಪ್ರಯೋಜನ ಪಡೆದುಕೊಳ್ಳಲಿಚ್ಛಿಸುವ ಫಲಾನುಭವಿಗಳು ಅ.31ರೊಳಗೆ ಪಾಟೀಲ್ ನರ್ಸಿಂಗ್ ಹೋಂನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.