ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ‘ಮಾ ಭಾರತಿ ಕೆ ಸಪೂತ್’ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದ್ದಾರೆ. ಯುದ್ಧದಲ್ಲಿ ಹುತಾತ್ಮರಾದ ಯೋಧರ ಕಲ್ಯಾಣ ನಿಧಿ (Armed Forces Battle Casualties Welfare Fund )ಗೆ ಕೊಡುಗೆಗಾಗಿ ಇದನ್ನು ಬಿಡುಗಡೆ ಮಾಡಲಾಗಿದೆ. ಈ ವೆಬ್‌ಸೈಟ್ ಮೂಲಕ ನಿಧಿಗೆ ಉದಾರವಾಗಿ ಕೊಡುಗೆ ನೀಡುವಂತೆ ಜನರಿಗೆ ರಾಜನಾಥ್ ಸಿಂಗ್ ಮನವಿ ಮಾಡಿದ್ದಾರೆ.
“ಸಶಸ್ತ್ರ ಪಡೆಗಳ ಯುದ್ಧದಲ್ಲಿ ಸಾವಿಗೀಡಾದವರ ಕಲ್ಯಾಣ ನಿಧಿಗೆ ಕೊಡುಗೆಗಾಗಿ ‘ಮಾ ಭಾರತಿ ಕೆ ಸಪೂತ್’ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ. ಈ ನಿಧಿಗೆ ಉದಾರವಾಗಿ ಕೊಡುಗೆ ನೀಡುವಂತೆ ಮತ್ತು ಭಾರತದ ಧೈರ್ಯಶಾಲಿಗಳ ಕುಟುಂಬಗಳನ್ನು ಬೆಂಬಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಅವರನ್ನು ಬೆಂಬಲಿಸುವುದು ನಮ್ಮ ನೈತಿಕ ಕರ್ತವ್ಯ” ಎಂದು ರಾಜನಾಥ್ ಟ್ವೀಟ್ ಮಾಡಿದ್ದಾರೆ.
ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಈ ಕಲ್ಯಾಣ ನಿಧಿ ಒಂದು ತ್ರಿ-ಸೇವಾ ನಿಧಿಯಾಗಿದ್ದು, ಯುದ್ಧದಲ್ಲಿ ಮರಣ ಹೊಂದಿದ ಸೈನಿಕರು/ನೌಕಾ ಯೋಧರು/ವಾಯು ಯೋಧರ ಕುಟುಂಬಗಳಿಗೆ ತಕ್ಷಣದ ಹಣಕಾಸಿನ ನೆರವು ನೀಡಲು ಬಳಸಿಕೊಳ್ಳಲಾಗುತ್ತದೆ,
“ವೆಬ್‌ಸೈಟ್ (www.maabharatikesapoot.mod.gov.in) ಜನರು ನೇರವಾಗಿ ನಿಧಿಗೆ ಆನ್‌ಲೈನ್‌ನಲ್ಲಿ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಆನ್‌ಲೈನ್ ಕೊಡುಗೆಯ ಪ್ರಮಾಣಪತ್ರವನ್ನು ಸಹ ಡೌನ್‌ಲೋಡ್ ಮಾಡಬಹುದು” ಎಂದು ಅದು ಹೇಳಿದೆ.
ಶುಕ್ರವಾರ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕ ಸಂಕೀರ್ಣದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಂಗ್ ಅವರು ತಮ್ಮ ಭಾಷಣದಲ್ಲಿ ಸಶಸ್ತ್ರ ಪಡೆಗಳ ಧೀರ ಸೈನಿಕರಿಗೆ ಗೌರವ ಸಲ್ಲಿಸಿದರು, ಅವರ ತ್ಯಾಗ ಮತ್ತು ಅಚಲ ಬದ್ಧತೆಯನ್ನು ಕೊಂಡಾಡಿದರು.
ಕೃಪೆ:-http://news13.in