ಭಟ್ಕಳ: ತಾಲೂಕಿನ ಯಲ್ವಡಿಕವೂರ ಪಂಚಾಯತ್ ವ್ಯಾಪ್ತಿಯ ರಾಷ್ಟ್ರಿಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ ಹುಲಿಗಿರ್ತಿ ದೇವಸ್ಥಾನದ ಪಕ್ಕದ ಧರೆ ಕುಸಿಯುವ ಪರಿಸ್ಥಿತಿಯಲ್ಲಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಆತಂಕವನ್ನುಂಟು ಮಾಡಿದೆ.
ದಿನನಿತ್ಯವೂ ರಾಷ್ಟ್ರೀಯ ಹೆದ್ದಾರಿಯ 66ರ ಮಾರ್ಗವಾಗಿ ಸಾವಿರಾರು ಬೈಕ್, ಬೃಹತ್ ವಾಹನಗಳು ಸಂಚರಿಸುತ್ತಿರುತ್ತವೆ. ಹಾಡುವಳ್ಳಿ, ಮಾರುಕೇರಿ, ಕವೂರು ಮಾರ್ಗವಾಗಿ ಭಟ್ಕಳಕ್ಕೆ ನಿತ್ಯವೂ ವ್ಯಾಪಾರ- ವಹಿವಾಟಿಗೆ ಗ್ರಾಮೀಣ ಭಾಗದ ಜನರು ಬರುತ್ತಿರುತ್ತಾರೆ. ಈ ರಸ್ತೆಗೆ ಹೊಂದಿಕೊಂಡಂತೆ 10 ಮೀಟರ್ ದೂರದಲ್ಲಿ ಗುಡ್ಡವಿದ್ದು, ಸದ್ಯದ ಹವಾಮಾನ ವೈಪರೀತ್ಯಗಳಿಂದಾಗಿ ಎಂದು ಮಳೆ ಬರುತ್ತದೋ ಎಂಬ ಮಾಹಿತಿ ಇಲ್ಲದ ಕಾರಣ ಈ ಗುಡ್ಡ ವಾಹನ ಸವಾರರಿಗೆ, ಜನರ ಪ್ರಾಣಕ್ಕೆ ಸಂಚಕಾರ ತರುವುದರಲ್ಲಿ ಸಂಶಯವಿಲ್ಲ ಎನ್ನುವುದು ಸಾರ್ವಜನಿಕರ ಹಾಗೂ ವಾಹನ ಸವಾರರ ಅಭಿಪ್ರಾಯವಾಗಿದೆ.
ಪಟ್ಟಣದಲ್ಲಿ ಕೆಲವೊಂದು ಕಡೆ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದು, ಇನ್ನು ಕೆಲವು ಕಡೆ ಕೆಲಸ ಇನ್ನೂ ಆರಂಭವಾಗಬೇಕಾಗಿದೆ. ಈ ಸಂದರ್ಭದಲ್ಲಿ ಅಗಲೀಕರಣದ ಹಿನ್ನೆಲೆ ಕೆಲವೊಂದು ರಸ್ತೆಯ ಅಕ್ಕಪಕ್ಕದ ಗುಡ್ಡವನ್ನು ತೆರವು ಮಾಡಿದ್ದು, ಅದರಲ್ಲಿ ಪ್ರಮುಖವಾಗಿ ಇಲ್ಲಿನ ಯಲ್ವಡಿಕವೂರು ಬಳಿಯ ಹುಲಿಗೀರ್ತಿ ದೇವಸ್ಥಾನದ ಸಮೀಪದ ಗುಡ್ಡವು ಸಹ ಒಂದಾಗಿದೆ. ಈ ಹಿಂದೆ ಅಬ್ಬರಿಸಿದ್ದ ಮಳೆಯಲ್ಲಿ ಈ ಗುಡ್ಡವು ಭಾಗಶಃ ಕುಸಿತ ಕಂಡು ಕೆಲ ಕಾಲ ಹೆದ್ದಾರಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾಗಿತ್ತು. ಅಂದು ಬಿದ್ದ ಗುಡ್ಡದ ಮಣ್ಣನ್ನು ಐಆರ್‌ಬಿ ಸಿಬ್ಬಂದಿ ಜೆಸಿಬಿ, ಟಿಪ್ಪರ್ ಬಳಸಿ ಕಣ್ಣಳತೆಯಷ್ಟು ಮಣ್ಣನ್ನು ಸ್ಥಳಾಂತರಿಸಿದ್ದು ಬಿಟ್ಟರೆ ಇನ್ನುಳಿದಂತೆ ಕುಸಿತಗೊಂಡ ಗುಡ್ಡವನ್ನು ಸಮರ್ಪಕವಾಗಿ ತೆರವು ಮಾಡದೇ ಬಿಟ್ಟಿದ್ದರ ಪರಿಣಾಮ ಈಗ ಗುಡ್ಡ ಮತ್ತೆ ಧರೆಗುರುಳುವ ಪರಿಸ್ಥಿತಿಗೆ ಬಂದಿದೆ.
ಈ ರಸ್ತೆಗೆ ಹೊಂದಿಕೊಂಡಿರುವ ಧರೆ ಒಂದೊಮ್ಮೆ ಏನಾದರು ಕುಸಿತಗೊಂಡರೆ ಪಾದಾಚಾರಿಗಳಿಗೆ ಅಥವಾ ವಾಹನ ಸವಾರರಿಗೆ ಸಾವು- ನೋವುಗಳು ಸಂಭವಿಸುವಂತಹ ಸಾಧ್ಯತೆಗಳಿವೆ. ದುರ್ಘಟನೆಗಳು ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಮುನ್ನೆಚ್ಚರಿಕಾ ಕ್ರಮವಾಗಿ ಕುಸಿಯುವ ಹಂತದಲ್ಲಿರುವ ಧರೆಯನ್ನು ತೆರವುಗೊಳಿಸುವುದು ಸೂಕ್ತ ಎಂಬುವುದು ಸ್ಥಳೀಯ ನಿವಾಸಿಗಳ ಅಭಿಪ್ರಾಯವಾಗಿದೆ. ಯಾವ ಸಂದರ್ಭದಲ್ಲಿ ಗುಡ್ಡ ಕುಸಿದು ಮಣ್ಣು ರಸ್ತೆಗೆ ಬರಲಿದೆಯೋ ಎಂಬುದು ಅನಿರೀಕ್ಷಿತವಾಗಿಯೇ ಇದ್ದು, ಈ ಬಗ್ಗೆ ತಾಲೂಕಾಡಳಿತ ಮೊದಲೇ ಜಾಗ್ರತೆ ವಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಯಿಸಿ ಸ್ಥಳ ಪರಿಶೀಲನೆ ಮಾಡಿ ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.