ಕಾರವಾರ: ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ (ಎಚ್ ಆ್ಯಂಡ್ ಟಿ)ವನ್ನು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ರೈತರಿಂದ ಹೆಚ್ಚು ಪಡೆದಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಐದು ವರ್ಷಗಳ ಅಕೌಂಟ್ ಆಡಿಟ್ ಮಾಡಿಸಿ, ಆ ಸಂದರ್ಭದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ರೈತರಿಗೆ ಕೊಡಿಸುವ ಜವಾಬ್ದಾರಿ ನಮ್ಮದು. ಈ ಬಗ್ಗೆ ತನಿಖೆ ನಡೆಸುತ್ತೇವೆ, ತನಿಖೆಯ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಸಭಾಭವನದಲ್ಲಿ ನಡೆದ ಕಬ್ಬು ಕಟಾವು, ಸಾಗಾಣಿಕೆ ವೆಚ್ಚ ಮತ್ತು ಇತರ ವಿಷಯಗಳ ಕುರಿತ ಕಬ್ಬು ಬೆಳೆಗಾರರ ಮುಖಂಡರು ಮತ್ತು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಸಮಾಲೋಚನೆ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸಲಹೆ ಬೆಲೆ (ಎಸ್‌ಎಪಿ) ನೀಡಲು ಕೋರಿದ್ದಾರೆ. ಆದರೆ ಈ ನಿರ್ಧಾರ ಮಾಡಬೇಕಾಗಿರುವುದು ರಾಜ್ಯ ಸರ್ಕಾರದ ಪರಮಾಧಿಕಾರ. ಇದಕ್ಕೆ ಸಂಬಂಧಿಸಿದಂತೆ ಅ.15ಕ್ಕೆ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಅಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ. ಹೀಗಾಗಿ ಇದರ ಬಗ್ಗೆ ನಾನಿಲ್ಲಿ ಏನೂ ಹೇಳಲಾಗುವುದಿಲ್ಲ ಎಂದರು.
ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ)ಯನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡುತ್ತದೆ. ಅದರ ಮಾರ್ಗಸೂಚಿಯಂತೆ ನಾವಿಲ್ಲಿ ದರ ನಿಗದಿ ಮಾಡುತ್ತೇವೆ. ಆದರೆ ಅದನ್ನು ಹೆಚ್ಚಿಸುವ ಬೇಡಿಕೆ ಇರುವುದು ಹಳಿಯಾಳದಲ್ಲಿ ಮಾತ್ರ. ಆದರೆ ಈ ಬಗ್ಗೆಯೂ ಮುಖಂಡರುಗಳು ಕೂಲಂಕುಷವಾಗಿ ಚರ್ಚೆ ಮಾಡಿದ್ದಾರೆ. ಇದಕ್ಕೆಲ್ಲ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಬೇಕಾಗುತ್ತದೆ. ಈಗಿನ ದರ ಏರಿಕೆಯ ದಿನಮಾನದಲ್ಲಿ ಎಫ್‌ಆರ್‌ಪಿ ಹೆಚ್ಚು ನಿಗದಿ ಮಾಡಬೇಕಿತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪುನರ್ ಪರಿಶೀಲನೆಗೆ ಶಿಫಾರಸ್ಸು ವರದಿ ನೀಡುತ್ತೇವೆ ಎಂದರು.