ಕಾರವಾರ: ವಾಹನಗಳ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವುದನ್ನು ನಗರಸಭೆ ಹಿಂಪಡೆಯುವಂತೆ ಆಗ್ರಹಿಸಿ ಅಂಗಡಿಕಾರರು ಕಾರವಾರ ನಗರಸಭೆಯೆದುರು ಜಮಾಯಿಸಿ ಒತ್ತಾಯಿಸಿದ್ದಾರೆ.
ಇಲ್ಲಿನ ನಗರಸಭೆಯಿಂದ ಪಾರ್ಕಿಂಗ್ ಶುಲ್ಕ ವಿಧಿಸಲು ಯೋಜನೆ ರೂಪಿಸಲಾಗಿದ್ದು, ಇದರಲ್ಲಿ ವ್ಯಾಪಾರಸ್ಥರುಗಳನ್ನೂ ಸೇರಿಸಲಾಗಿದೆ. ಅಂಗಡಿಗೆ ಬರಲು ದಿನನಿತ್ಯ ವಾಹನ ಬಳಕೆ ಮಾಡಬೇಕಾಗುತ್ತದೆ. ಪ್ರತಿನಿತ್ಯ ಶುಲ್ಕ ಪಾವತಿಸಲು ಸಾಧ್ಯವೇ? ನಗರಸಭೆ ಅನ್ಯಾಯ ಮಾಡುತ್ತಿದೆ ಎಂದು ವ್ಯಾಪಾರಸ್ಥರು ನಗರಸಭೆಯೆದುರು ಜಮಾವಣೆಗೊಂಡು ಆಕ್ರೋಶ ಹೊರಹಾಕಿದ್ದಾರೆ. ಈ ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂಪಡೆಯದಿದ್ದರೆ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರಸಭೆ ಅಧ್ಯಕ್ಷ ಡಾ.ನಿತಿನ ಪಿಕಳೆ, ನಗರಸಭೆಯಿಂದ ಅನುಷ್ಠಾನ ಮಾಡಲಾದ ಪಾರ್ಕಿಂಗ್‌ಗೆ ಶುಲ್ಕವಿಲ್ಲ. ತಪ್ಪು ಸಂದೇಶ ರವಾನೆಯಾಗಿದೆ. ಹಾಲಿ ಪ್ರಾಯೋಗಿಕವಾಗಿ ಸಂಚಾರಿ ನಿಯಮ ಅನುಷ್ಠಾನ ಮಾಡಲಾಗುತ್ತದೆ. ಇದರಲ್ಲಿ ಬದಲಾವಣೆಗಳು ಆಗಬೇಕಿದ್ದಲ್ಲಿ ಎಲ್ಲರ ಸಲಹೆ ಪಡೆದು ಡಿಸಿಯವರ ಅನುಮೋದನೆ ಪಡೆದು ಅನುಷ್ಠಾನ ಮಾಡುತ್ತೇವೆ. ಸುಳ್ಳು ಸುದ್ದಿಗೆ ಕಿವಿಕೊಡಬೇಡಿ ಎಂದರು. ಕೆಲ ಹೊತ್ತು ನಡೆದ ಚರ್ಚೆಯಲ್ಲಿ ಅಂತಿಮವಾಗಿ, ನಗರಸಭೆಗೆ ಶುಲ್ಕ ವಿಧಿಸುವ ಯಾವುದೇ ಉದ್ದೇಶವಿಲ್ಲ. ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಗರಸಭೆಯಿಂದ ಸ್ಪಷ್ಟಪಡಿಸಿದ ಬಳಿಕ ವ್ಯಾಪಾರಸ್ಥರು ತೆರಳಿದರು.