Slide
Slide
Slide
previous arrow
next arrow

ಹದಗೆಟ್ಟ ಕುಮಟಾ-ಶಿರಸಿ ಹೆದ್ದಾರಿ: ದುರಸ್ತಿಗೆ ಆಗ್ರಹಿಸಿ ಕರವೇ ನೇತೃತ್ವದಲ್ಲಿ ರಸ್ತೆ ತಡೆ

300x250 AD

ಕುಮಟಾ: ಸಂಪೂರ್ಣ ಹದಗೆಟ್ಟ ಕುಮಟಾ- ಶಿರಸಿ ಹೆದ್ದಾರಿಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸಾರ್ವಜನಿಕರು ಕತಗಾಲ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಕತಗಾಲ್ ಹೆದ್ದಾರಿಯಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು. ಕುಮಟಾ-ಶಿರಸಿ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಬೃಹತ್ ಕಂದಕ ಬಿದ್ದಿರುವುದರಿಂದ ಪ್ರಯಾಣ ದುಸ್ತರವಾಗಿದೆ. ಈ ಹೊಂಡಮಯ ರಸ್ತೆಯಿಂದ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಅನೇಕರು ಸಾವು, ನೋವು ಅನುಭವಿಸುವಂತಾಗಿದೆ. ಈ ಬಗ್ಗೆ ಗಮನಹರಿಸಬೇಕಾದ ಶಾಸಕರು, ಜನಪ್ರತಿನಿಧಿಗಳು ನಿದ್ದೆಗೆ ಜಾರುವ ಮೂಲಕ ನಿರ್ಲಕ್ಷ್ಯ ವಹಿಸಿರುವುದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೇ ಕುಮಟಾ ಶಾಸಕರು ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡು ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯು ಪ್ರವಾಸಿ ತಾಣಗಳಿಗೆ ಪ್ರಸಿದ್ಧವಾಗಿದೆ. ಆದರೆ ಈ ರಸ್ತೆಯ ದುರವ್ಯವಸ್ಥೆಯಿಂದ ಜಿಲ್ಲೆಯನ್ನು ಪ್ರವಾಸಿಗರು ಶಪಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಸಿಯಲ್ಲಿ ವಿಧಾನ ಪರಿಷತ್ ಸಭಾಧ್ಯಕ್ಷರಿದ್ದಾರೆ. ನಮ್ಮ ಶಾಸಕರು ಈ ಬಗ್ಗೆ ಸದನದಲ್ಲಿ ಒಮ್ಮೆ ಕೂಡ ಧ್ವನಿ ಎತ್ತದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ನಾವು ಕರವೇ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಸಂಬಂಧಪಟ್ಟ ಇಲಾಖೆಗೆ ಎಚ್ಚರಿಕೆ ನೀಡುತ್ತಿದ್ದೇವೆ. ತಕ್ಷಣ ಈ ಹೆದ್ದಾರಿಯನ್ನು ದುರಸ್ತಿಪಡಿಸುವ ಕಾರ್ಯ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಎಚ್ಚರಿಸಿದರು.

ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಕಾಂಗ್ರೆಸ್ ಮುಖಂಡರಾದ ಕೃಷ್ಣಾನಂದ ವೆರ್ಣೇಕರ್, ಕೃಷ್ಣ ಗೌಡ, ಅರುಣ ಗೌಡ, ಮಂಜುನಾಥ ಗೌಡ, ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ, ಪರಮಾನಂದ ಹೆಗಡೆ ಮಾತನಾಡಿ, ಕೋಟ್ಯಾಂತರ ರೂ ಗುತ್ತಿಗೆ ಪಡೆದ ಕಂಪನಿ ರಸ್ತೆ ಸರಿಪಡಿಸದೇ ಜನರ ಜೀವ ತೆಗೆಯುತ್ತಿದೆ. ಈಗಿರುವ ರಸ್ತೆಯನ್ನು ಕೂಡಲೇ ಮರುಡಾಂಬರೀಕರಣ ಮಾಡಬೇಕು ಅಥವಾ ಆರ್‌ಎನ್‌ಎಸ್ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ರಸ್ತೆ ಹಾಳಾಗಿ ಜನರ ಜೀವ ಹೋಗುತ್ತಿದ್ದರೂ ಗುತ್ತಿಗೆ ಪಡೆದ ಕಂಪನಿ, ರಾಹೆ ಪ್ರಾಧಿಕಾರ, ಸ್ಥಳೀಯ ಶಾಸಕರುಗಳು ನಿದ್ದೆಯಲ್ಲಿದ್ದಾರೆ. ನೀವು ಈ ಹೆದ್ದಾರಿಯ ನಿರ್ವಹಣೆಯ ಹಣವನ್ನು ಶಾಸಕರೊಂದಿಗೆ ಹಂಚಿಕೊಂಡಿದ್ದರಿಂದ ಈ ಹೆದ್ದಾರಿಯನ್ನು ಸುಧಾರಣೆ ಮಾಡುವ ಮನಸ್ಥಿತಿ ನಿಮಗಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಕಮಿಷನ್ ಶಾಸಕರ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

300x250 AD

ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ರಾಜಕುಮಾರ್, ಜಗನ್ನಾಥ ಹಾಗೂ ರಸ್ತೆ ಗುತ್ತಿಗೆ ಪಡೆದ ಆರ್‌ಎನ್‌ಎಸ್ ಕಂಪನಿಯ ಪ್ರತಿನಿಧಿ ಆರ್ ಬಿ ಪಾಟೀಲ್, ಇಂಜಿನೀಯರ್ ವಿಶ್ವನಾಥ ಶೆಟ್ಟಿ ಅರವರನ್ನು ಪ್ರತಿಭಟನಾನಿರತರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಹೆದ್ದಾರಿಯಿಂದ ಎಬ್ಬಿಸಲು ಪ್ರಯತ್ನಿಸಿದಾಗ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು. ಅತೀ ಶೀಘ್ರದಲ್ಲಿ ಹೆದ್ದಾರಿ ದುರಸ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು. ಪ್ರತಿಭಟನೆಯಲ್ಲಿ ಪ್ರಮುಖರಾದ ಜಿ.ಜಿ.ಹೆಗಡೆ, ಮಹೇಂದ್ರ ನಾಯ್ಕ, ಪಾಂಡು ಪಟಗಾರ, ಬಲೀಂದ್ರ ಗೌಡ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಟ್ರಾಫಿಕ್ ಸಮಸ್ಯೆ: ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದರಿಂದ ಹೆದ್ದಾರಿಯ ಇಕ್ಕೆಲಗಳಲ್ಲಿ ಕಿ.ಮೀ.ವರೆಗೆ ವಾಹನಗಳು ಸಾಲಿನಲ್ಲಿ ನಿಲ್ಲುವಂತಾಗಿದ್ದರಿಂದ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಹೀಗಾಗಿ ಪ್ರಯಾಣಿಕರಿಗೆ ತೊಂದರೆಯಾಯಿತು. ಕುಮಟಾ ಪಿಐ ತಿಮ್ಮಪ್ಪ ನಾಯ್ಕ ನೇತೃತ್ವದ ತಂಡ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿತು.

Share This
300x250 AD
300x250 AD
300x250 AD
Back to top