ಶಿರಸಿ: ರಾಜ್ಯದ ಹಲವು ಮೊರಾರ್ಜಿ ವಸತಿ ಶಾಲೆಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ತಾಲೀಮು ಶಿಬಿರ ನಡೆಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಅವಕಾಶ ನೀಡಿದ್ದಾರೆಂದು ಆರೋಪಿಸಿರುವ ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಗಣೇಶ ರಾಠೋಡ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೂತಾಂಡಹಳ್ಳಿಯಲ್ಲಿರುವ ಸರ್ಕಾರದ ಕ್ರೈಸ್ಟ್ ಸಂಸ್ಥೆಯ ವಸತಿ ನಿಲಯವನ್ನು ಅ.9ರಿಂದ 15ರವರೆಗೆ ಒಟ್ಟು 9 ದಿನಗಳ ಕಾಲ ಸಂಘ ಪರಿವಾರದ ತಾಲೀಮು ಶಿಬಿರ ನಡೆಸಲು ಸ್ವತಃ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರೇ ಬಿಟ್ಟು ಕೊಡಲು ಶಿಫಾರಸ್ಸು ಮಾಡಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ಕೋಲಾರ ವಿಭಾಗ ಪ್ರಶಿಕ್ಷಣ ಶಿಬಿರವನ್ನು ನಡೆಸಲು ಕರ್ನಾಟಕ ಸರ್ಕಾರವೇ ಸರ್ಕಾರಿ ವಸತಿ ಶಾಲೆಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳನ್ನು ಸಂಘ ಪರಿವಾರದ ತರಬೇತಿ ತಾಣಗಳನ್ನಾಗಿ ಮಾರ್ಪಡಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ. ಕೋಲಾರ ಮೂಲದ ಪ್ರೇರಣಾ ಪ್ರತಿಷ್ಠಾನ ಆಯೋಜಿಸಿರುವ ಶಿಬಿರದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸುತ್ತಿದ್ದು, ಇದರಿಂದ ವಸತಿ ಶಾಲೆಯ ವಿದ್ಯಾರ್ಥಿಗಳ ಬೋಧನಾ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ. ತಕ್ಷಣವೇ ಈ ಆದೇಶ ಹಿಂಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕೋಲಾರ ಮಾತ್ರವಲ್ಲದೆ ಈಗಾಗಲೇ ಶಿರಸಿ ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಅ.7ರಿಂದ ಈ ತರಬೇತಿ ನಡೆಯುತ್ತಿದೆ. ಬಾಲಕರು- ತರುಣರಿಗೆ ಯೋಗಾಸನ, ರಾಷ್ಟ್ರೀಯ ಚಿಂತನೆ ಕುರಿತು ದೈಹಿಕ– ಬೌದ್ಧಿಕ- ವ್ಯಕ್ತಿತ್ವ ವಿಕಸನ ಶಿಬಿರದ ಹೆಸರಿನಲ್ಲಿ ತಾಲೀಮು ನಡೆಸಲು ಅನುಮತಿ ನೀಡಲಾಗಿದೆ. ಆದರೆ ಅದರ ಹೆಸರಿನಲ್ಲಿ ಆರ್‌ಎಸ್‌ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ತಾಲೀಮು ನಡೆಸುವುದಾಗಿ ಕರಪತ್ರಗಳನ್ನು ಹಂಚುತ್ತಿದೆ. ಇದು ತೀವ್ರ ಖಂಡನೀಯ. ಯಾವುದೇ ಶಾಲಾ, ಕಾಲೇಜು, ವಸತಿ ನಿಲಯಗಳಲ್ಲಿ ಯಾವುದೇ ಮತೀಯವಾದಿ ಸಂಘಟನೆಗಳಿಗೆ, ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ನೀಡಬಾರದು ತಕ್ಷಣವೇ ಮಂತ್ರಿಗಳು ತಮ್ಮ ಆದೇಶ ಮರಳಿ ಪಡೆಯಬೇಕು ಎಂದು ಅವರು ಒತ್ತಾಯಿದ್ದಾರೆ.