ಹಳಿಯಾಳ: ಕಳೆದ 14 ದಿನಗಳಿಂದ ತಾಲೂಕಿನಲ್ಲಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಅಹೋರಾತ್ರಿ ಹೋರಾಟವನ್ನ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿ ನಡೆದ ಕಬ್ಬು ಬೆಳೆಗಾರರು, ಕಾರ್ಖಾನೆ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿಭಟನೆ ಹಿಂಪಡೆಯಲಾಗಿದೆ.
ಪ್ರಸಕ್ತ ಸಾಲಿನ ಕಬ್ಬಿಗೆ ಉತ್ತಮ ದರ ನೀಡುವುದು, ಹಿಂದಿನ ಬಾಕಿ ಪ್ರತಿ ಟನ್ ಕಬ್ಬಿಗೆ 305 ರೂ. ಪಾವತಿಸುವುದು, ಕಟಾವು ಮತ್ತು ಸಾಗಾಟ ವೆಚ್ಚ ಪರಿಷ್ಕರಣೆ ಹಾಗೂ 2019ರಿಂದ 2021ರವರೆಗೆ ಮೂರು ವರ್ಷಗಳ ಕಾಲ ರೈತರಿಂದ ಪಡೆದ ಹೆಚ್ಚುವರಿ ಸಾಗಾಟ ವೆಚ್ಚವನ್ನು ರೈತರಿಗೆ ವಾಪಸ್ ಕೊಡುವುದು, ಹಳಿಯಾಳ ಕ್ಷೇತ್ರದ ಕಬ್ಬನ್ನು ಮೊದಲ ಪ್ರಾಶಸ್ತ್ಯದ ಮೇರೆಗೆ ನುರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಳೆದ 14 ದಿನಗಳಿಂದ ತಾಲೂಕಿನಲ್ಲಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಡದೆ, ಕರ್ಣಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಬ್ಬು ಸಾಗಾಟದ ವಾಹನಗಳನ್ನು ತಡೆದು ರೈತರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನೆ ದಿನೆ ದಿನೇ ಕಾವು ಪಡೆಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಸೋಮವಾರ ರೈತ ಮುಖಂಡರನ್ನು ಕಾರವಾರದಲ್ಲಿ ಸಭೆ ನಡೆಸಲು ತಮ್ಮ ಕಚೇರಿಗೆ ಆಹ್ವಾನಿಸಿದ್ದರು. ಆದರೇ ರೈತ ಮುಖಂಡರು ಈ ಆಹ್ವಾನ ತಿರಸ್ಕರಿಸಿ ಹಳಿಯಾಳಕ್ಕೆ ಬಂದು ಸಭೆ ನಡೆಸುವಂತೆ ಆಗ್ರಹಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳು ಪಟ್ಟಣದ ಆಡಳಿತ ಸೌಧಕ್ಕೆ ಆಗಮಿಸಿ ಸಭೆ ನಡೆಸಿದರು. ಶಾಸಕ ಆರ್.ವಿ.ದೇಶಪಾಂಡೆ, ಮಾಜಿ ಶಾಸಕ ಸುನೀಲ್ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಂದೀಪಕುಮಾರ ಬೋಬಾಟಿ, ಶಂಕರ ಕಾಜಗಾರ, ಎನ್.ಎಸ್.ಜಿವೋಜಿ ಸೇರಿ ಪ್ರಮುಖ ಮುಖಂಡರು, ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ಜೆ.ವೆಂಕಟರಾವ್ ಅವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿದರು.
ಇತ್ತ ಆಡಳಿತ ಸೌಧದಲ್ಲಿ ಸಭೆ ನಡೆಯುತ್ತಿದ್ದರೆ, ಅತ್ತ ಸೌಧದ ಹೊರಗಡೆ ಸಾವಿರಾರು ರೈತರು ಜಿಲ್ಲಾಧಿಕಾರಿಗಳ ನಿರ್ಣಯದ ಮೇಲೆ ಹದ್ದಿನ ಕಣ್ಣಿಟ್ಟು ಮೇಲಿಂದ ಮೇಲೆ ಘೋಷಣೆಗಳನ್ನು ಮೊಳಗಿಸುತ್ತಾ ಕಾಯುತ್ತಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಜಿಲ್ಲಾಧಿಕಾರಿಗಳು ಖುದ್ದಾಗಿ ರೈತರ ಸಮ್ಮುಖದಲ್ಲಿ ಬಂದು ಸಭೆಯ ನಿರ್ಣಯಗಳನ್ನು ತಿಳಿಸಿದರು. ಅ.13ರಂದು ಸಕ್ಕರೆ ಆಯುಕ್ತರ ಸಭೆಯಲ್ಲಿ ಬೇಡಿಕೆಗಳ ಬಗ್ಗೆ ಅಂತಿಮ ನಿರ್ಣಯಕ್ಕೆ ಬರುವುದಾಗಿ ತಿಳಿಸಿ, ರೈತರು ಪ್ರತಿಭಟನೆ ಹಿಂಪಡೆಯುವAತೆ ಮನವಿ ಮಾಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರರುಗಳಾದ ಪ್ರಕಾಶ ಗಾಯಕವಾಡ, ಶೈಲೇಶ ಪರಮಾನಂದ, ಕೃಷಿ ಅಧಿಕಾರಿ ಪಿಐ ಮಾನೆ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
· ಹಳಿಯಾಳ ಕ್ಷೇತ್ರದ ರೈತರ ಕಬ್ಬನ್ನು ಪಾಳಿಯ ಪ್ರಕಾರ ಮೊದಲ ಆದ್ಯತೆಯಂತೆ ಅವರ ಆದ್ಯತೆಯ ಲಿಸ್ಟ್(ಪ್ರಕಟಣೆ) ಎಲ್ಲ ಹಳ್ಳಿಗಳಲ್ಲಿ ಅಂಟಿಸಬೇಕು. ಈ ಕೆಲಸದ ಜವಾಬ್ದಾರಿ ಹಳಿಯಾಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೇ ಹಾಗೂ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಅವರು ನೋಡಿಕೊಳ್ಳುವುದು
· ಕಟಾವು ಮತ್ತು ಸಾಗಾಟ ವೆಚ್ಚ ಪರಿಷ್ಕರಣೆ ಹಾಗೂ 2019 ಮತ್ತು 2020ರ ಆದೇಶಗಳ ಬಗ್ಗೆ ಆಯುಕ್ತರ ಸಭೆಯಲ್ಲಿ ಚರ್ಚಿಸುವುದು
· ಪ್ರಸಕ್ತ ಸಾಲಿನ ಎಫ್‌ಆರ್‌ಪಿ ದರ ತೀರಾ ಕಡಿಮೆಯಾಗಿದ್ದು, ಈ ಬಗ್ಗೆ ಕೂಡ ರೈತರಿಗೆ ಉತ್ತಮ ದರ ನಿಗದಿಪಡಿಸುವ ಕುರಿತು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರ ಸಮ್ಮುಖದಲ್ಲಿಯೇ ಅ.13ರಂದು ಚರ್ಚಿಸಿ ನಿರ್ಣಯಕ್ಕೆ ಬರುವುದು
· ಅ.13ರ ಆಯುಕ್ತರ ಸಭೆಯವರೆಗೂ ರೈತರ ಬೇಡಿಕೆಯಂತೆ ಕಾರ್ಖಾನೆ ಕಾರ್ಯಾರಂಭ ಮಾಡದಿರುವುದು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆಯವರು ಅ.13 ಸಕ್ಕರೆ ಆಯುಕ್ತರ ಸಭೆಯ ಬಳಿಕ ಕಾರ್ಖಾನೆ ಪ್ರಾರಂಭಿಸುವ ಭರವಸೆ ನೀಡಲಾಗಿದೆ. ಹೀಗಾಗಿ 14 ದಿನಗಳ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ಒಂದಾನುವೇಳೆ ಅ.13ರಂದು ಕೂಡ ನ್ಯಾಯ ದೊರಕದೆ ಇದ್ದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮತ್ತೆ ಸಜ್ಜಾಗಲಿದ್ದೇವೆ.:: ಸಂದೀಪಕುಮಾರ ಬೋಬಾಟಿ, ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ
ಪೊಲೀಸ್ ಭದ್ರತೆ: ಜಿಲ್ಲಾಧಿಕಾರಿಗಳ ಸಭೆಯ ಹಿನ್ನೆಲೆಯಲ್ಲಿ ಹಾಗೂ ರೈತರ ಹೋರಾಟದ ಕಿಚ್ಚು ಹೆಚ್ಚಿರುವ ಕಾರಣ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಡಿಎಆರ್ ಮತ್ತು ಕೆಎಸ್‌ಆರ್‌ಪಿ ತುಕಡಿ, 12 ಪಿಎಸ್‌ಐ, 5 ಸಿಪಿಐ ಸೇರಿ ಡಿವೈಎಸ್ಪಿ ಕೆ.ಎಲ್.ಗಣೇಶ ನೇತೃತ್ವದಲ್ಲಿ ಹಳಿಯಾಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.