ಶಿರಸಿ: ಜಗನ್ಮಾತೆ ಸೇವೆ ಮಾಡುವವರು ಆಪತ್ತು ಇದ್ದರೂ ದಾಟುತ್ತಾರೆ, ಆಪತ್ತಿನ ಭಯವಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು ತಾಲೂಕಿನ ದೇವತೆಮನೆಯ ಶ್ರೀಲಲಿತಾ ಭದ್ರಕಾಳಿ ದೇವಸ್ಥಾನದಲ್ಲಿ ಸೋಮವಾರ ನಡೆದ ನವಚಂಡಿ ಮಹಾಯಾಗದ ಮಂಗಲೋತ್ಸವದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ದೇವಿ ಆರಾಧನೆ ಮಾಡಿದರೆ ಆಪತ್ತು,ವಿಪತ್ತು ಎರಡರಿಂದಲೂ ನಮ್ಮನ್ನು ರಕ್ಷಿಸುತ್ತಾಳೆ.ಆ ಜಗನ್ಮಾತೆ ಆರಾಧಿಸಿದರೆ ನಮಗೆ ಅಭಯ ನೀಡುತ್ತಾಳೆ. ಸಂಕಷ್ಟ, ಸಂಕಟಗಳಿಂದ ಹೊರ ಬರಲು ದೇವಿ ಉಪಾಸನೆ ನಮಗೆ ಇರುವ ದಾರಿ ಎಂದರು.
ಶ್ರೀಗಳು ರವಿವಾರ ಹಾಗೂ ಸೋಮವಾರ ದೇವಸ್ಥಾನದಲ್ಲಿ ಇದ್ದು ದೇವಿ ಪೂಜೆ, ಹವನದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಶಿಷ್ಯರು ಶ್ರೀಗಳ ಪಾದಪೂಜೆ, ಭಿಕ್ಷಾ ಸೇವೆ ಕೂಡ ನಡೆಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಾಯ ಗೋ. ಹೆಗಡೆ, ವೈದಿಕ ವಿದ್ವಾಂಸರು, ಭಕ್ತರು ಈ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.