ಕುಮಟಾ : ನಿರಂತರವಾಗಿ ಜಿಲ್ಲೆಯ ಆಯ್ದ ಅರಣ್ಯ ಪ್ರದೇಶದಲ್ಲಿನ ಬೆಲೆಬಾಳುವ ಗಿಡ ಮರಗಳ ಕಳ್ಳತನದೊಂದಿಗೆ ಪರಿಸರ ನಾಶ ಜರಗುತ್ತಿದ್ದಾಗಿಯೂ ಅರಣ್ಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನ ಖಂಡನಾರ್ಹ. ಮರಗಳ್ಳತನದ ಪ್ರಕರಣವನ್ನ ಸಮಗ್ರ ತನಿಖೆಗೆ ಒಳಪಡಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ತಾಲೂಕಿನ ಸಾಂತಗಲ್, ಉಳ್ಳುರು, ಅಬ್ಬಳ್ಳಿ, ಹರೊಳ್ಳಿ, ಹಿಂಡ್‌ಬೈಲ್, ಸಂತೇಗುಳಿ ಹಾಗೂ ಮುಂಡಗೋಡ ತಾಲೂಕಿನ ಕಾತೂರ ವಲಯ ಹಾಗೂ ಇನ್ನೀತರ ಕ್ಷೇತ್ರ, ಯಲ್ಲಾಪುರ, ಶಿರಸಿ ಬನವಾಸಿ ಭಾಗಗಳಲ್ಲಿ ಮೌಲ್ಯಯುಕ್ತ ಉತ್ಕೃಷ್ಟ ಮಟ್ಟದ ಬೆಳೆಬಾಳುವ ಗಿಡಗಳು ಕಳ್ಳತನವಾಗುತ್ತಿದ್ದಾಗಲೂ ಅರಣ್ಯ ಇಲಾಖೆ ನಿರ್ಲಕ್ಷ್ಯದ ವಿರುದ್ಧ ಸೂಕ್ತ ಕ್ರಮ ಜರುಗಿಸುವುದು ಅವಶ್ಯವೆಂದು ಅವರು ಪ್ರತಿಪಾದಿಸಿದ್ದಾರೆ.
ಅರಣ್ಯವಾಸಿಗಳ ದಿನನಿತ್ಯ ಮೂಲಭೂತ ಸೌಕರ್ಯ ಹಾಗೂ ವ್ಯವಸ್ಥೆಯ ದಿಶೆಯಲ್ಲಿ ಕಿರುಕುಳ, ಹಿಂಸೆ ನೀಡುವ ಪ್ರವೃತ್ತಿ ಅರಣ್ಯ ಸಿಬ್ಬಂದಿಗಳು ಮಾಡುತ್ತಿದ್ದು ಗಿಡ ಮರ ಕಳ್ಳತನದ ಮೂಲಕ ಪರಿಸರ ನಾಶದ ಕುರಿತು ಆಸಕ್ತಿ ಕಡಿಮೆ ಹೊಂದಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಅರಣ್ಯ ಇಲಾಖೆಯ ನೀತಿಯ ಕುರಿತು ಟೀಕಿಸಿದ್ದಾರೆ.