ಸಿದ್ದಾಪುರ: ಜನಪದರಲ್ಲಿ ಪ್ರತಿಯೊಂದು ಹಬ್ಬ, ಆಚರಣೆಗಳಲ್ಲಿ ತುಂಬಾ ವಿಶೇಷತೆಗಳಿವೆ.ಅದರಲ್ಲಿಯೂ ಮಲೆನಾಡಿನ ಹಳ್ಳಿಗಳಲ್ಲಿ ಹಬ್ಬಗಳನ್ನು ಅತ್ಯಂತ ಸಂಭ್ರಮದಿಂದ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಇತರೆಡೆ ಶೀಗಿ ಹುಣ್ಣಿಮೆ ಎಂತಲೂ, ಬುಧ ಪೂರ್ಣಿಮೆ ಎಂದು ಆಚರಿಸುವ ಶರದ್ ಋತುವಿನ ಆಶ್ವೀಜ ಮಾಸದ ಹುಣ್ಣಿಮೆಯನ್ನು ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಹಬ್ಬವಾಗಿ ಆಚರಿಸುತ್ತಾರೆ.ಈ ಭೂಮಿ ಹುಣ್ಣಿಮೆ ಪೂಜೆ ಎಂದರೆ ಭೂದೇವಿಗೆ ಸೀಮಂತ ಮಾಡುವುದಾಗಿದೆ. ರೈತನು ಬೆಳೆದ ಫಸಲು ಹಾಲು ತುಂಬಿ ಗರ್ಭಕಟ್ಟಿ ನಿಂತಿರುವಾಗ ಭೂತಾಯಿಗೆ ಈ ಸೀಮಂತ ಮಾಡುವ ಕ್ರಿಯೆಯೇ ಭೂಮಿ ಪೂಜೆಯಾಗಿದೆ ಎಂದು ಹೇಳಲಾಗುತ್ತದೆ.
ಭೂಮಿಹುಣ್ಣಿಮೆ ಹಬ್ಬವನ್ನು ಮಲೆನಾಡಿನ ಶಿರಸಿ, ಸಿದ್ದಾಪುರ, ಸೊರಬ,ಸಾಗರ ತಾಲ್ಲೂಕಿನಲ್ಲಿ ಈ ವಿಶೇಷವಾಗಿ ಆಚರಿಸುತ್ತಾರೆ. ಹೊಲಗದ್ದೆಗಳೊಂದಿಗೆ ಅಡಿಕೆ ಬೆಳೆಗಾರರು ಕೂಡಾ ತೋಟದಲ್ಲಿ ಭೂಮಿ ಪೂಜೆ ಮಾಡುತ್ತಾರೆ. ಮೊಸರನ್ನ, ಚಿತ್ರಾನ್ನ ಖಡಬು,ಕಜ್ಜಾಯ, ದೋಸೆಗಳನ್ನು ಮಾಡಿ ಭೂದೇವಿಗೆ ಅರ್ಪಿಸಿ ಸಂಭ್ರಮ ಪಡುತ್ತಾರೆ.
ಈ ಹಬ್ಬಕ್ಕೆ ಬಳಸುವ ಬೂಮಣಿ ಬುಟ್ಟಿ ಸಂಪ್ರದಾಯಿಕ ಹಸೆ ಚಿತ್ತಾರವನ್ನು ತನ್ನೊಳಗೆ ತುಂಬಿಕೊಂಡಿದೆ. ಈ ಹಬ್ಬಕ್ಕೆ ‘ಭೂಮಣಿ’ ಎಂಬ ಬುಟ್ಟಿಯನ್ನು ತಯಾರಿಸಿ ಅದಕ್ಕೆ ಶೇಡಿ ಕೆಮ್ಮಣ್ಣು ಚಿತ್ತಾರ ಬಿಡಿಸಿ ಅಲಂಕರಿಸಲಾಗುತ್ತದೆ. ಆ ಬುಟ್ಟಿಯಲ್ಲಿ ಕಡುಬು, ಸಿಹಿ ತಿಂಡಿ, ಪೂಜಾ ಸಾಮಗ್ರಿ ಗಳನ್ನು ತುಂಬಿಕೊAಡು ಹೊಲಕ್ಕೆ ಹೊಗುತ್ತಾರೆ. ಅಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಒಂದು ಖಡಬನ್ನು ಗದ್ದೆಯಲ್ಲಿ ಹುಗಿಯುತ್ತಾರೆ. ಪೂಜೆಯಾದ ಮೇಲೆ ಪ್ರಸಾದ ಸ್ವೀಕರಸಿ ಅಲ್ಲಿಯೇ ಊಟ ಮಾಡುತ್ತಾರೆ. ಇನ್ನು ಕೆಲವರು ಮನೆಗೆ ಬಂದು ಮನೆ ದೇವರಿಗೆ ಎಡೆಯನ್ನು ಇಟ್ಟು ನಂತರ ಊಟ ಮಾಡುವುದು ರೂಢಿ.
ಚರಗ ಬೀರುವುದು: ಈ ಹಬ್ಬದ ದಿನ ಮುಂಜಾನೆಯೇ ಅಂದರೆ ಕಾಗೆ ಹಾಗೂ ಇತರ ಪಕ್ಷಿಗಳು ಎದ್ದು ನೀರನ್ನು ಮುಟ್ಟುವ ಮೊದಲೆ ಹೊಲಗಳಲ್ಲಿ ಚರಗ ಬೀರಲಾಗುತ್ತದೆ. ಅದಕ್ಕೆ ಹಚ್ಚಂಬಲಿ (ಹಚ್ಚ ಹಸಿರಿನ ಅಂಬಲಿ) ಅಚ್ಚಂಬರಿವೆ ಸೊಪ್ಪು, ಹೀರೆಕಾಯಿ, ಕುಂಬಳ ಕಾಯಿಯನ್ನು ಕೊಚ್ಚಿ ಹಾಕಿ, ಕಡುಬು ಮೊಸರನ್ನಗಳನ್ನು ಸೇರಿಸಿ ತಮ್ಮ ಎಲ್ಲಾ ಗದ್ದೆ ತೋಟಗಳಿಗೆ ಬೀರುತ್ತಾರೆ. ಈ ಕಾರ್ಯವನ್ನು ಮುಗಿಸಿ ಮನೆಗೆ ಬರಲಾಗುತ್ತದೆ.
ಭೂಮಣಿ: ಭೂಮಿ ಹುಣ್ಣಿಮೆ ಹಬ್ಬದಲ್ಲಿ ಭೂಮಣಿ ಅಥವಾ ಭೂಮಿ ಹುಣ್ಣಿಮೆಯ ಬುಟ್ಟಿ ಅತ್ಯಂತ ವಿಶೇಷವಾದದು. ಇದು ಸಂಪೂರ್ಣ ನೈಸರ್ಗಿಕವಾಗಿ ಮಾಡಿರುತ್ತಾರೆ. ಬಿದಿರಿನಿಂದ ಮಾಡಿರುವ ಅಲಂಕಾರಿಕ ಬುಟ್ಟಿಗೆ ಸಗಣಿಯಿಂದ ಸಾರಿಸಿ ನಂತರ ಶೇಡಿ,ಕೆಂಪು ಮಣ್ಣಿನಿಂದ ಬಣ್ಣ ಬಳಿಯಲಾಗುತ್ತದೆ. ಅದರ ಮೇಲೆ ಅಕ್ಕಿ ಹಿಟ್ಟು ಮತ್ತು ಹಾಲಿನ ಮಿಶ್ರಣದ ಬಣ್ಣದಿಂದ ಹಸೆ ಚಿತ್ತಾರ ಬರೆಯಲಾಗುತ್ತದೆ. ಈ ಕಾರ್ಯ ದಶಮಿಯ ನಂತರ ಪ್ರಾರಂಭವಾಗುತ್ತದೆ. ಇದರಲ್ಲಿ ಭೂಮಿ ಪೂಜೆ ಹಾಗೂ ಇತರ ಸಂಪ್ರದಾಯಿಕ ಹಸೆ ಚಿತ್ತಾರ ಇರುತ್ತದೆ. ಇದು ಈ ಹಬ್ಬದ ಅತ್ಯಂತ ಆಕರ್ಷಣೆ. ಇಲ್ಲಿ ಭೂಮಣಿ ಬುಟ್ಟಿ ತನ್ನದೆ ಆದ ವಿಶೇಷತೆಯನ್ನು ಈ ಹಬ್ಬದ ಆಚರಣೆಯಲ್ಲಿ ಪಡೆದುಕೊಂಡಿದೆ.
ಹಬ್ಬದ ತಿಂಡಿ ಹಾಗೂ ಬಳೆ, ಉಡಿ ಹಾಗೂ ಇತರೆ ಪೂಜಾ ಸಾಮಗ್ರಿಗಳೊಂದಿಗೆ ಭೂಮಣಿ ಬುಟ್ಟಿಯೊಂದಿಗೆ ಹೊಲಗದ್ದೆಗಳಿಗೆ ಹೋಗಿ ಪೂಜೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕಾಗೆಗೆ ಎಡೆ ಇಡಲಾಗುತ್ತದೆ.ಅದು ಮುಟ್ಟಿದ (ಸೇವಿಸಿದ) ನಂತರ ಇವರು ಊಟ ಮಾಡುತ್ತಾರೆ.ಇದು ಒಂದು ನಂಬಿಕೆ. ಇದರಿಂದ ಭೂತಾಯಿಯ ಸೀಮಂತ ಮಾಡಿದ ಧನ್ಯತೆಯಭಾವ ರೈತರದಾಗಿದೆ. ಈ ಕಾರಣಕ್ಕೆ ಭೂಮಿ ಹುಣ್ಣಿಮೆ ಹಬ್ಬ ಮಲೆನಾಡಿನಲ್ಲಿ ವಿಶೇಷತೆಯನ್ನು ಪಡೆದುಕೊಂಡಿದೆ.
• ಪ್ರೊ.ಎಂ.ಕೆ.ನಾಯ್ಕ ಹೊಸಳ್ಳಿ