ಕಾರವಾರ: ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ನಿಯಮಾನುಸಾರ ಪಿ.ಎಫ್ ಮತ್ತು ಇ.ಎಸ್.ಐ ಕಡಿತ ಗೊಳಿಸಿ ವೇತನ ಪಾವತಿ ಮಾಡುವ ಕುರಿತು ಎಲ್ಲಾ ನಗರ ಸಭೆ ಮತ್ತು ಪುರ ಸಭೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಜೂ ಮೊಗವೀರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಾಫಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪೌರ ಕಾರ್ಮಿಕರ ಸೌಲಭ್ಯಗಳ ಹಾಗೂ ಹಾಗೂ ಆರೋಗ್ಯದ ಕುರಿತು ಕಾರ್ಯಾಗಾರ ನಡೆಸುವ ಕುರಿತು ಚರ್ಚಿಸಲಾಯಿತು.
ಪೌರಕಾರ್ಮಿಕರಿಗೆ ಗ್ರಹಭಾಗ್ಯ ಯೋಜನೆಯಡಿಯಲ್ಲಿ ಕಾರವಾರದಲ್ಲಿ 15 ಮನೆಗಳು, ಮುಂಡಗೋಡದಲ್ಲಿ 34 ಮನೆಗಳು, ಭಟ್ಕಳದಲ್ಲಿ 18 ಮನೆಗಳು ಪೂರ್ಣವಾಗಿದ್ದು ಇನ್ನೂ 18 ಮನೆ ನಿರ್ಮಾಣ ಕಾಮಗಾರಿ ಹಂತದಲಿದ್ದು, ದಾಂಡೇಲಿಯಲ್ಲಿ ಮನೆ ನಿರ್ಮಾಣದ ಕಾಮಗಾರಿಯನ್ನು 10 ದಿನದೊಳಗಾಗಿ ಪೂರ್ಣಗೊಳಸುವುದಾಗಿ ವರದಿ ನೀಡಿದರು.
ಸಭೆಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿರುವ ಕುರಿತು, ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಮನರ್ವಸತಿ ಅಧಿನಿಯಮ 2013 ರಂತೆ ದಾಖಲುಗೊಂಡ ಅಪರಾಧಗಳ ನೊಂದಣಿಯನ್ನು ಮತ್ತು ಅವುಗಳ ವಿಚಾರಣೆ ನಡೆಸುವುದನ್ನು ಹಾಗೂ ಈ ಬಗ್ಗೆ ಕಾನೂನು ಕ್ರಮ ಜರುಗಿಸಿರುವುದರ ಕುರಿತು, ಮಹಾನಗರ ಪಾಲಿಕೆ ನಗರ ಸಭೆ,ಪುರಸಭೆ,ಪಟ್ಟಣ ಪಂಚಾಯತ, ಗ್ರಾಮ ಪಂಚಾಯತಗಳಲ್ಲಿ ಮ್ಯಾನ್ ಹೋಲ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸಲು ಸಕ್ಲಿಂಗ್ ಹಾಗೂ ಜೆಸ್ಟಿಂಗ್ ಯಂತ್ರಗಳನ್ನು ಬಳಸುತ್ತಿರುವ ಬಗ್ಗೆ ಹಾಗೂ ಇ.ಪಿ.ಎಫ್ ಮತ್ತು ಇ.ಎಸ್.ಐ ಹಣವನ್ನು ಕಾರ್ಮಿಕರ ವೈಯಕ್ತಿಕ ಖಾತೆಗೆ ಜಮೆ ಮಾಡಿರುವ ವಿಷಯಗಳು ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.