ಕುಮಟಾ: ತಾಲೂಕಿನ ಮಿರ್ಜಾನ್‌ನ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀಮಹಾಸತಿ ಭೈರವಿ ದೇವಾಲಯದಲ್ಲಿ ಮಹಾನವಮಿಯಂದು ದೇವಿಯನ್ನು ವಿವಿಧ ಫಲಗಳಿಂದ ಅಲಂಕೃತಗೊಳಿಸಿ ಸಿದ್ಧಿಧಾತ್ರಿ ರೂಪದಲ್ಲಿ ಪೂಜಿಸಲಾಯಿತು.
ತಾಲೂಕಿನ ಮಿರ್ಜಾನ್‌ನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಮಹಾನವಮಿ ದಿನದಂದು ದೇವಿಯನ್ನು ಸಿದ್ಧಿಧಾತ್ರಿ ರೂಪದಲ್ಲಿ ವಿವಿಧ ಫಲಗಳಿಂದ ಅಲಂಕೃತಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಿಯ ಸನ್ನಿಧಿಯಲ್ಲಿ ಬೆಳಗ್ಗೆಯಿಂದಲೇ ಲಲಿತ ಸಹಸ್ರನಾಮ, ಪಂಚಾಮೃತ ಅಭಿಷೇಕ, ಆಯುಧ ಪೂಜೆ, ದುರ್ಗಾ ಹವನ, ಭಜನೆ ಸೇರಿದಂತೆ ಸಂಜೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಿತು. ಆಯುಧ ಪೂಜೆಯನ್ನು ಕೂಡ ವಿಶೇಷವಾಗಿ ನಡೆಸಿದರು. ಶಾಲಾ ಬಸ್‌ಗಳು ಸೇರಿದಂತೆ ಇನ್ನಿತರೆ ಕಲಿಕಾ ಸಾಮಗ್ರಿಗಳಿಗೆ ಪೂಜೆ ಸಲ್ಲಿಸಿ, ಆಯುಧ ಪೂಜೆ ನೆರವೇರಿಸಲಾಯಿತು.
ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವಿಯ ಪ್ರಸಾದ ಭೋಜನ ಸ್ವೀಕರಿಸಿದರು. ಗ್ರಾಮ ಒಕ್ಕಲು ಯಕ್ಷಗಾನ ಬಳಗ, ಹೊನ್ನಾವರ ದವರು ತಾಳಮದ್ದಳೆಯೊಂದಿಗೆ ಪ್ರದರ್ಶನ ನೀಡಿದರು. ಹೊನ್ನಾವರ ತಾಲೂಕ ಒಕ್ಕಲಿಗರ ಸಂಘ, ಭೈರವಿ ಮಹಿಳಾ ಸಹಕಾರಿ ಸಂಘ ನಿಯಮಿತ, ಗ್ರಾಮ ಒಕ್ಕಲು ಯುವಬಳಗ, ಗ್ರಾಮ ಒಕ್ಕಲು ಯಕ್ಷಗಾನ ಬಳಗ, ಬಾಲಚಂದ್ರ ಗೌಡರು ಮತ್ತು ಧರ್ಮೇಶ್ ಸಿರಿಬೈಲ್ ಇತರರು ಪಾಲ್ಗೊಂಡು ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾದರು.