ಕುಮಟಾ: ತಾಲೂಕಿನ ಧಾರೇಶ್ವರದ ಗುಡಬಳ್ಳಿಯ ಪುರಾಣ ಪ್ರಸಿದ್ಧ ಶ್ರೀಮಹಾಗಣಪತಿ ಮಹಾಮಾಯೆ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಕುದಿಯುತ್ತಿರುವ ಎಣ್ಣೆಯಿಂದ ವಡೆ ತೆಗೆಯುವ ಕಾರ್ಯಕ್ರಮ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತು.
ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಧಾರೇಶ್ವರದ ಗುಡಬಳ್ಳಿಯಲ್ಲಿ ನೆಲೆಸಿರುವ ಪುರಾಣ ಪ್ರಸಿದ್ದ ಶ್ರೀ ಮಹಾಗಣಪತಿ ಮಹಾಮಾಯೆ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಭಕ್ತರು ನೀಡಿದ ಹೂವಿನಿಂದ ಶ್ರೀದೇವಿಯನ್ನು ಅಲಂಕೃತಗೊಳಿಸಿ, ವಿವಿಧ ಪೂಜಾ ಕೈಕಂರ್ಯ ನೆರವೇರಿಸಿದರು. ಬೆಳಗ್ಗೆಯಿಂದ ಸಂಜೆ ವರೆಗೂ ಸಾವಿರಾರು ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದು ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ತಾಲೂಕು ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಆಗಮಿಸಿದ ಭಕ್ತರು ದೇವಿಯ ಅಲಂಕಾರವನ್ನು ಕಣ್ತುಂಬಿಕೊಂಡು, ಹಣ್ಣುಕಾಯಿ ಪೂಜಾ ಸೇವೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿ ಧನ್ಯರಾದರು.
ವಿಜಯ ದಶಮಿ ದಿನ ಪ್ರತಿ ವರ್ಷದಂತೆ ಈ ವರ್ಷವೂ ಕುದಿಯುತ್ತಿರುವ ಎಣ್ಣೆಯಲ್ಲಿರುವ ವಡೆಯನ್ನು ಬರಿಗೈಯಿಂದಲೇ ತೆಗೆಯುವ ಕಾರ್ಯಕ್ರಮ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತು. ಭಕ್ತ ಸಂತೋಷ ರಾಯ್ಕರ್ ಅವರು ದೇವರ ನಾಮಸ್ಮರಣೆ ಮಾಡುತ್ತ ಕುದಿಯುತ್ತಿರುವ ಎಣ್ಣೆಯಲ್ಲಿ ಕೈಹಾಕಿ ವಡೆ ತೆಗೆಯುವ ದೃಶ್ಯ ರೋಮಾಂಚನ ಮೂಡಿಸಿತ್ತು. ಮಹಾ ಮಂಗಳಾರತಿ ನಂತರ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಶ್ರೀ ದೇವರ ಪಲ್ಲಕಿ ಉತ್ಸವ, ಭಜನಾ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ರಾಮದಾಸ ಬಾಬುರಾಯ ರಾಯ್ಕರ್ ಮಾತನಾಡಿ, ಈ ದೇವಿಯು ಗೋವಾ ಮೂಲದ್ದು, ಅಲ್ಲಿಂದ ಈ ದೇವರನ್ನು ಗುಡಬಳ್ಳಿಗೆ ತಂದು ಪ್ರತಿಷ್ಠಾಪಿಸಲಾಯಿತು. ವಿವಿಧ ಹಬ್ಬಗಳಲ್ಲೂ ವಿಶೇಷ ಪೂಜೆ ಮತ್ತು ಆಚರಣೆ ನಡೆಸಲಾಗುತ್ತದೆ. ವಿಜಯದಶಮಿ ನಿಮಿತ್ತ ಒಡೆ ತೆಗೆಯುವ ಕಾರ್ಯಕ್ರಮ ಸಾವಿರಾರು ಭಕ್ತರ ನಡುವೆ ಅದ್ಧೂರಿಯಾಗಿ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು, ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು.