ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಶ್ರೀ ಕಟ್ಟೆಬೀರಪ್ಪ ದೇವಸ್ಥಾನದ ಆವರಣದಲ್ಲಿ ವಿಜಯದಶಮಿ ಪ್ರಯುಕ್ತ ಭಗವಾ ಧ್ವಜಾರೋಹಣ ನೆರವೇರಿಸಿ, ಭಗವಾ ಧ್ವಜ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಘೋಷ್ ಪ್ರಮುಖ ದಿನೇಶ ಕುಮಾರ್ ಮಾತನಾಡಿ ವಸುದೈವ ಕುಟುಂಬಕಮ್ ಎಂಬ ಶ್ರೇಷ್ಠ ಪರಂಪರೆ ಭಾರತದ್ದು, ಸರ್ವೇ ಜನಾಃ ಸುಖಿನೋ ಭವಂತು ಎಂದು ಲೋಕದ ಒಳಿತನ್ನು ಬಯಸುವವರು ಭಾರತೀಯರು ಎಂದರು. ಸನಾತನ ಹಿಂದೂ ಧರ್ಮದ – ನಮ್ಮ ನೆಲದ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು ಎಂದು ಹೇಳಿದರು.
ಶಿವಾಜಿ ಮಹಾರಾಜರು ಗುಲಾಮಿತನದ ವಿರುದ್ಧ ಹೋರಾಡಿ ಹಿಂದವೀ ಸ್ವರಾಜ್ಯದ ಸ್ಥಾಪನೆ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮದನ್ ಲಾಲ್ ಧಿಂಗ್ರಾ ಅಮ್ಮ ಭಾರತ ಮಾತೆ ನೀನು ದೊಡ್ಡ ತಾಯಿ, ನಾನು ದಡ್ಡ ಮಗ, ನಿನಗಾಗಿ ನಾನು ಪ್ರಾಣವನ್ನಲ್ಲದೆ ಇನ್ನೇನು ಕೊಡಲು ಸಾಧ್ಯ ಎಂದು ಹೇಳಿದ್ದನ್ನು ಉಲ್ಲೇಖಿಸಿದರು.
ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ ನವರಾತ್ರಿ ಎಂದರೆ ಶಕ್ತಿಯ ಆರಾಧನೆ, ದೇವಿಯ ಒಂಭತ್ತು ವಿಧದ ಪ್ರಕಟೀಕರಣವನ್ನು ಪೂಜಿಸುವ ಪಾವನ ಪರ್ವ; ವಿಜಯ ದಶಮಿಯ ಸಂದರ್ಭದಲ್ಲಿ ಪವಿತ್ರ ಭಗವಾ ಧ್ವಜಾರೋಹಣ ಮಾಡಿದ್ದೇವೆ, ಇದು ಮುಂದಿನ ನಮ್ಮ ಎಲ್ಲಾ ಕಾರ್ಯಗಳಿಗೂ ಶಕ್ತಿ ತುಂಬಲಿದೆ ಎಂದು ಹೇಳಿದರು. ಎಲ್ಲರನ್ನೂ ಒಪ್ಪಿಕೊಳ್ಳುವ, ಎಲ್ಲರನ್ನೂ ಅಪ್ಪಿಕೊಳ್ಳುವ ಹಿಂದೂ ಸಮಾಜವನ್ನು ಕಟ್ಟಲು ನಾವೆಲ್ಲರೂ ಸಂಘಟಿತರಾಗಬೇಕು ಎಂದರು.
ಪಿಎಫ್ಐ ಸಂಘಟನೆಯ ನಿಷೇಧ ದೇಶದ ವಿರುದ್ಧ ಷಡ್ಯಂತ್ರ ರೂಪಿಸುವವರಿಗೆ ತಕ್ಕ ಪಾಠ; ಕೆಟ್ಟದ್ದು ಎಲ್ಲವೂ ಅಳಿಯಲಿ, ಒಳ್ಳೆಯದು ವಿಜೃಂಭಿಸಲಿ ಎಂದು ಹೇಳಿದರು. ಇಂದು ಜಾಗತಿಕ ವೇದಿಕೆಯಲ್ಲಿ ಭಾರತದ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತಿರುವ ಅಮೃತಕಾಲದಲ್ಲಿ ನಾವಿದ್ದೇವೆ; ನಮ್ಮ ಜವಾಬ್ದಾರಿ ಹೆಚ್ಚಿದೆ, ಇದನ್ನರಿತು ಪ್ರತಿಯೊಬ್ಬರೂ ಕೆಲಸ ಮಾಡೋಣ ಎಂದು ಹೇಳಿದರು. ಆರ್.ಎಸ್.ಎಸ್ ನಿಷೇಧ ಮಾಡಿ ಎನ್ನುವ ಕೆಲವು ನಾಯಕರಿಗೆ ರಾಷ್ಟ್ರಭಕ್ತ ಸಂಘಟನೆಯ ಬಗ್ಗೆ ಏನೂ ಅರಿವಿಲ್ಲ, ತಮ್ಮ ಸ್ವಾರ್ಥಕ್ಕೆ ಸಂಘವನ್ನು ದೂಷಿಸುವ ಕೆಲಸ ಮಾಡುತ್ತಾರೆ, ಹಾಗಾಗಿಯೇ ಜನರು ಅಂಥವರನ್ನು ತಿರಸ್ಕರಿಸಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುರುರಾಜ ಶಾನಭಾಗ ಮಾತನಾಡಿ ರಾಷ್ಟ್ರ ಧ್ವಜದ ಬಣ್ಣದ ಬಗ್ಗೆ ಆಕಸ್ಮಿಕವಾಗಿ ತಪ್ಪಾಗಿ ಮಾತನಾಡಿದರೆ ಸಹಿಸೋಣ, ಆದರೆ ಉದ್ದೇಶ ಪೂರ್ವಕವಾಗಿ ಕೇಸರಿಯ ಬದಲು ಕೆಂಪು ಎಂದು ಹೇಳಿದರೆ ಕ್ಷಮಿಸಲಾಗದು ಎಂದರು. 2047ಕ್ಕೆ ಭಾರತವನ್ನು ಇಸ್ಲಾಮಿಕ್ ಸ್ಟೇಟ್ ಮಾಡುತ್ತೇವೆ ಎನ್ನುವವರ ಬಗ್ಗೆ ಸಮಾಜ ಇನ್ನಷ್ಟು ತಿಳಿದುಕೊಳ್ಳಬೇಕಿದೆ ಎಂದರು. ಗೀತಾ ಹೆಗಡೆ ಈ ಸಂದರ್ಭದಲ್ಲಿ ಕೆಲವು ಹಿತನುಡಿಗಳನ್ನಾಡಿದರು.
ಸಂಘಟಕರಾದ ಹೇರಂಭ ನಾಯ್ಕ ಸ್ವಾಗತಿಸಿದರು, ವಿನಯ ಮುಂಗ್ರಾಣಿ ನಿರ್ವಹಿಸಿದರು, ರಾಮಚಂದ್ರ ತಾರೇಸರ ವೈಯಕ್ತಿಕ ಗೀತೆಯನ್ನು ಹಾಡಿದರು ಮತ್ತು ನಿರಂಜನ ಹೆಗಡೆ ವಂದಿಸಿದರು, ನವೀನ ತಾರೇಸರ, ಸುಜಿತ್ ಹೆಗಡೆ, ರವಿ ಹಿರೇಹದ್ದ, ಗಿರೀಶ ಭಟ್ಟ ಹೊಸ್ತೋಟ, ನಾರಾಯಣ ಹೆಗಡೆ ಚಾರೆಕೋಣೆ, ಮಂಜುನಾಥ ಮಡಿವಾಳ, ಅಣ್ಣಪ್ಪ ನಾಯ್ಕ, ರಜತ, ಪ್ರಮೋದ, ಸುಮಂತ ಮತ್ತು ಸಂತೋಷ ಉಪಸ್ಥಿತರಿದ್ದರು.
Attachments area