ಮುಂಡಗೋಡ: ದೇಶ ಕಾಯುವ ಸೈನಿಕರು, ಬೆವರು ಸುರಿಸಿ ಸಮಾಜ ಕಟ್ಟುವ ಕಾರ್ಮಿಕರು ಹಾಗೂ ದೇಶಕ್ಕಾಗಿ ಅನ್ನ ನೀಡುವ ರೈತರನ್ನು ಗೌರವದಿಂದ ಕಾಣುವವರೆಗೆ ನಮ್ಮ ದೇಶ ಸುಭಿಕ್ಷವಾಗಿರಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.
ಬಿಜೆಪಿ ಎಸ್‌ಟಿ ಮೋರ್ಚಾ ವತಿಯಿಂದ ಪಟ್ಟಣದ ಟೌನ್ ಹಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸೇವಾಪಾಕ್ಷಿಕದ ಪ್ರಯುಕ್ತ ಹಮ್ಮಿಕೊಂಡಿದ್ದ ಎಸ್ಟಿ ಸಮುದಾಯದ ಸಾಧಕರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದೆ. ಕಾರ್ಮಿಕರ ಮಕ್ಕಳನ್ನು ವಿಮಾನದ ಪೈಲೆಟ್ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಎರಡು ವರ್ಷದಲ್ಲಿ 845 ಕೋಟಿ ರೂ.ಗಳನ್ನು ವಿದ್ಯಾರ್ಥಿಗಳ ಜೀವನಕ್ಕಾಗಿ ಸರ್ಕಾರ ಮೀಸಲಿರಿಸಿದೆ. ಕೆಎಎಸ್, ಐಎಎಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು ಹಾಸ್ಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಮಿಕ ಮಕ್ಕಳಿಗೆ ಮದುವೆ ಧನಸಹಾಯ ಹಾಗೂ ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್‌ನಂಥ ಹತ್ತಾರು ಯೋಜನೆಗಳನ್ನು ತರಲಾಗಿದೆ ಎಂದರು.
ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ತಳವಾರ್ ಮಾತನಾಡಿ, ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಎಸ್ಟಿ ಸಮುದಾಯದ ಎಂಟು ಜನರನ್ನ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ. ಎಸ್‌ಟಿ ಸಮುದಾಯದ ದ್ರೌಪದಿ ಮುರ್ಮುರನ್ನ ರಾಷ್ಟ್ರಪತಿಯನ್ನಾಗಿ ಬಿಜೆಪಿ ನೇತೃತ್ವದ ಸರ್ಕಾರ ಮಾಡಿದೆ ಎಂದರು.
ಪ್ರಾವಾಸ್ತವಿಕವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಹಳೆಬಂಕಾಪುರ ಮಾತನಾಡಿದರು. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಜಯಸುಧ ಭೋವಿವಡ್ಡರ, ಪ.ಪಂ. ಉಪಾಧ್ಯಕ್ಷ ಶ್ರೀಕಾಂತ ಸಾನು, ಸಿದ್ದು ಹಡಪದ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಬಾಬಣ್ಣ ಓಣಿಕೇರಿ ಹಾಗೂ ವಿಠ್ಠಲ್ ಮಾಳಂಬಿಡ ಇದ್ದರು.