ಕಾರವಾರ: ನೌಕಾನೆಲೆ ನಿರಾಶ್ರಿತರು ಸುಮಾರು ಮೂರು ದಶಕಗಳಿಂದ ಪರಿಹಾರ ಸಿಗದೆ ತೊಂದರೆಗೊಳಗಾಗಿದ್ದರು. ಆದರೆ, ನಾನು ಶಾಸಕಿಯಾದಾಗ ಸ್ಥಳೀಯರ ನಿಯೋಗದೊಂದಿಗೆ ಸಂಸದರಾದ ಅನಂತಕುಮಾರ್ ಹೆಗಡೆ ಅವರ ನೇತೃತ್ವದಲ್ಲಿ ದೆಹಲಿಗೆ ಹೋಗಿ ಸಮಸ್ಯೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ವಿವರಿಸಿ, ಮನವರಿಕೆ ಮಾಡಿಕೊಟ್ಟ ನಂತರ ಹಣ ಸಂದಾಯವಾಗಿದೆ. ನಿರಾಶ್ರಿತರಿಗೆ ನ್ಯಾಯ ದೊರಕಿಸುವಲ್ಲಿ ಶ್ರಮಿಸಿದ ಸಮಾಧಾನ ನನಗಿದೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ತಾಲ್ಲೂಕಿನ ಅಮದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದಗಾ ಕಾಲೋನಿಯ ರಸ್ತೆ 0.00 ಕಿ.ಮೀ.ನಿಂದ 3.80 ಕಿ.ಮೀ.ವರೆಗೆ ಒಂದು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ನಾನು ಶಾಸಕಿಯಾದಾಗ ಇಲ್ಲಿ ಭೇಟಿ ನೀಡಿದಾಗ ಚರಂಡಿ, ವಿದ್ಯುತ್‌ಕಂಬ, ತಂತಿ ರಸ್ತೆ ಇಲ್ಲಿರುವ ಸಮಸ್ಯೆಯನ್ನು ಅರಿತು ಸರ್ವೆ ಮಾಡಿಸಿ ರಸ್ತೆಗೆ ಒಂದು ಕೋಟಿ ರೂಪಾಯಿಯನ್ನು ನೀಡಲಾಗಿದೆ. ಅಲ್ಲದೇ, ಇಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಅನಾಹುತ ಸಂಭವಿಸುವ ಮೊದಲು ಸರಿಪಡಿಸಲಾಗುತ್ತದೆ. ಅದಕ್ಕಾಗಿ ಈಗಾಗಲೇ ವಿಸ್ತೃತ ವರದಿಯನ್ನು ಸಲ್ಲಿಸಲಾಗಿದೆ. ಅದೂ ಕೂಡ ಶೀಘ್ರದಲ್ಲಿ ಆಗುತ್ತದೆ. ಚರಂಡಿ ಸಮಸ್ಯೆಯನ್ನು ನಿವಾರಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಸರ್ಕಾರ ಮೀನುಗಾರರಿಗೆ, ರೈತರಿಗೆ ಕಿಸಾನ್ ಕಾರ್ಡ್ ಮಾಡಿದೆ. ಆದರೆ, ನನ್ನ ಕ್ಷೇತ್ರದ ಜನರು ಅತಿ ಕಡಿಮೆ ಸಂಖ್ಯೆಯಲ್ಲಿ ಪಡೆದುಕೊಂಡಿದ್ದಾರೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿಜೀ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಎಲ್ಲರೂ ಇದರ ಲಾಭವನ್ನು ಪಡೆದುಕೊಳ್ಳಬೇಕು. ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಜೀ ಅವರು ಮೀನುಗಾರರಿಗೆ ಹಾಗೂ ನೀರಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ಮೀನುಗಾರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಕೇಳಿಕೊಂಡಾಗ ಪ್ರತ್ಯೇಕ ಪ್ಯಾಕೇಜ್ ಘೋಷಿಸಿದ್ದರು. ನಂತರ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಮೀನುಗಾರರಿಗೆ ಎಲ್ಲ ರೀತಿಯ ಸೌಲಭ್ಯ ಸಿಗುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಶಾ ನಾಯ್ಕ, ಉಪಾಧ್ಯಕ್ಷ ರವಿ ದುರ್ಗೇಕರ, ಸದಸ್ಯರು, ಊರಿನ ಮುಖಂಡರು, ಸಾರ್ವಜನಿಕರು, ಪಕ್ಷದ ಪದಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಘನತ್ಯಾಜ್ಯ ಘಟಕ ಉದ್ಘಾಟನೆ; ನೂತನವಾಗಿ ನಿರ್ಮಾಣಗೊಂಡ ಘನತ್ಯಾಜ್ಯ ಘಟಕವನ್ನು ಅಮದಳ್ಳಿಯಲ್ಲಿ ರೂಪಾಲಿ ನಾಯ್ಕ ಉದ್ಘಾಟಿಸಿದರು. ನಮ್ಮ ಸುತ್ತಮುತ್ತಲಿನ ಸ್ವಚ್ಛತೆ ಕಾಪಾಡುವುದು ಅವಶ್ಯಕವಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ಅವಶ್ಯಕವಾಗಿದೆ ಎಂದರು.
ಶಾಲೆಗಳು ರಾಜಕೀಯ ರಹಿತವಾಗಿರಬೇಕು; ಸರಸ್ವತಿ ದೇವಿಯ ನೆಲೆಯಾಗಿರುವ ಶಾಲೆಗಳು ರಾಜಕೀಯ ರಹಿತವಾಗಿ ಮಕ್ಕಳ ಬೌದ್ಧಿಕ, ಶಾರೀರಿಕ ವಿಕಸನದ ತಾಣಗಳಾಗಿರಬೇಕು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ತಾಲ್ಲೂಕಿನ ಅಮದಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಶಾಲೆ ದೇಗುಲದಂತೆ ಅಲ್ಲಿ ಸರಸ್ವತಿಯ ನೆಲೆಸಿರುತ್ತಾಳೆ. ಶಾಲೆಯಲ್ಲಿ ಹೇಳಿದ ಪಾಠಗಳನ್ನು ಅದೇ ದಿನ ಅಭ್ಯಾಸ ಮಾಡಬೇಕು. ಪರೀಕ್ಷೆ ಬಂದಾಗಲೇ ಅಭ್ಯಾಸ ಮಾಡಬಾರದು. ನಿರಂತರ ಅಭ್ಯಾಸ ಮಾಡಬೇಕು. ಉನ್ನತ ಶಿಕ್ಷಣದ ಜೊತೆಗೆ ಕೌಶಲವನ್ನು ಅಳವಡಿಸಿಕೊಳ್ಳಬೇಕು. ಕಾರವಾರ ಮತ್ತು ಅಂಕೋಲಾ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಗೂ ಶ್ರಮಿಸುತ್ತಿದ್ದೇನೆ. ಪ್ರಾಥಮಿಕ ಹಂತದಿಂದ ಪಿಯುಸಿ ಶಿಕ್ಷಣದವರೆಗೂ ವಿದ್ಯಾರ್ಥಿಗಳಿಗೆ ಸಿಗುವಂತಹ ವ್ಯವಸ್ಥೆಯಾಗಿದೆ. ಕನ್ನಡ ಅಷ್ಟೇ ಅಲ್ಲದೇ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ನೀಡಲಾಗುತ್ತದೆ ಎಂದರು.
ತಂದೆ- ತಾಯಿ ಹಾಗೂ ಗುರುಗಳು ಹೇಳುವ ಮಾತುಗಳನ್ನು ಮಕ್ಕಳು ಕೇಳಬೇಕು. ಅವರನ್ನು ಗೌರವಿಸಬೇಕು. ಉನ್ನತ ಗುರಿಗಳನ್ನು ಹೊಂದಬೇಕು. ತಂತ್ರಜ್ಞಾನ ಬಳಕೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಶಿಕ್ಷಣದ ಜತೆ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಪಾಲ್ಗೊಂಡು ಸಾಧನೆಯನ್ನು ಮಾಡಬೇಕು. ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು. ಸಾಮಾನ್ಯ ಜ್ಞಾನವನ್ನು ತಿಳುವಳಿಕೆ ಇರಬೇಕು. ಇವೆಲ್ಲವೂ ಇಂದಿನ ಅವಶ್ಯಕವಾಗಿದೆ. ಮಕ್ಕಳು ಯಾವುದೇ ರೀತಿಯ ಶೈಕ್ಷಣಿಕವಾಗಿ ಹಿಂದುಳಿಯಬಾರದು ಎಂದರು.
ಸರ್ಕಾರ ಶಿಕ್ಷಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವೆಲ್ಲವೂ ಮಕ್ಕಳಿಗೆ ತಲುಪಿಸಲಾಗುತ್ತಿದೆ. ಶಿಕ್ಷಣದಲ್ಲಿ ಯಾವುದೇ ಕೊರತೆಯಾಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಮಳೆಗಾಲದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸ್ಥಳೀಯವಾಗಿ ಅವಶ್ಯಕವಾಗುವಂತಹ ಕಟ್ಟಡದ ವಿನ್ಯಾಸವನ್ನು ರೂಪಿಸಬೇಕು. ಅಚ್ಚುಕಟ್ಟಾಗಿ ಸುಂದರವಾದಂತಹ ಕಟ್ಟಡವನ್ನು ನಿರ್ಮಿಸಬೇಕೆಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರಿಗೆ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮೂಲೆ ಮೂಲೆಗಳಲ್ಲೂ ಅಭಿವೃದ್ಧಿ ಮಾಡುತ್ತಿದ್ದಾರೆ. ಶೈಕ್ಷಣಿಕ ಸುಧಾರಣೆ ಮಾಡುತ್ತಿದ್ದಾರೆ. ಯೋಜನೆಗಳನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಗಳಿಗೆ ನೇರವಾಗಿ ಹಣವನ್ನು ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಆಶಾ ನಾಯ್ಕ, ಉಪಾಧ್ಯಕ್ಷರಾದ ರವಿ ದುರ್ಗೇಕರ, ಉಪನಿರ್ದೇಶಕರು, ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸದಸ್ಯರು, ಪಾಲಕರು, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.