ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಮತ್ತು ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ‘ಗ್ರೀನ್ ಪ್ಯಾಂಥರ್ಸ್ ಆಫ್ ಉತ್ತರ ಕನ್ನಡ’ ಎಂಬ ವಿನೂತನ ಕಾರ್ಯಕ್ರಮವನ್ನು ಪ್ರಸ್ತುತ ವರ್ಷದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ನಾಲ್ಕು ಹಂತದಲ್ಲಿ ಆಯೋಜಿಸಲಾಗಿದ್ದು, ಮೊದಲನೇ ಹಂತದಲ್ಲಿ ಪ್ರತಿ ತಾಲೂಕಿನಿಂದ 5 ವಿಜ್ಞಾನ ಶಿಕ್ಷಕರನ್ನು ಆಯ್ಕೆ ಮಾಡಿ ಒಂದು ದಿನದ ಕಾರ್ಯಾಗಾರ ಮಾಡಲಾಗುತ್ತಿದೆ. ಎರಡನೇ ಹಂತದಲ್ಲಿ ಪ್ರತಿ ತಾಲೂಕಿನಿಂದ 100 ವಿದ್ಯಾರ್ಥಿಗಳನ್ನು, ಮೂರನೇ ಹಂತದಲ್ಲಿ ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಸಾಗರ, ಸಸ್ಯ ಮತ್ತು ವನ್ಯಜೀವಿ ಅಧ್ಯಯನದ ವಿಷಯಗಳ ಮೇಲೆ ಕಾರ್ಯಾಗಾರವನ್ನು ಹಮ್ಮಿಕೊಂಡು ಬಹು ಆಯ್ಕೆ ಪರೀಕ್ಷೆ ಮೂಲಕ 15 ವಿದ್ಯಾರ್ಥಿಗಳಂತೆ ಒಟ್ಟು 165 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಒಟ್ಟು 165 ವಿದ್ಯಾರ್ಥಿಗಳನ್ನು ಅವರ ಆಸಕ್ತಿ ಅನುಸಾರ ವಿಷಯವಾರು ವಿಂಗಡಿಸಲಾಗಿದ್ದು, 90 ವಿದ್ಯಾರ್ಥಿಗಳು ವನ್ಯಜೀವಿ, 36 ವಿದ್ಯಾರ್ಥಿಗಳು ಸಸ್ಯ ಅಧ್ಯಯನ ಮತ್ತು 38 ವಿದ್ಯಾರ್ಥಿಗಳು ಸಾಗರ ಅಧ್ಯಯನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವನ್ಯಜೀವಿ ಅಧ್ಯಯನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಈಗಾಗಲೇ 3 ದಿನದ ತರಬೇತಿಯನ್ನು ಕುಳಗಿ ನೇಚರ್ ಕ್ಯಾಂಪ್‌ನಲ್ಲಿ ನೀಡಲಾಗಿದೆ. ಸಾಗರ ಮತ್ತು ಸಸ್ಯ ಅಧ್ಯಯನ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಸೆ.29ರಿಂದ ಅ.01ರವರೆಗೆ 3 ದಿನಗಳ ಕಾಲ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ.
ಸೆ.29ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿಜ್ಞಾನ ಕೇಂದ್ರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ತರಬೇತಿಯ ಉದ್ದೇಶ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜೀವವೈವಿಧ್ಯದ ವಿಶೇಷತೆ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಪ್ರಿಯಾಂಗಾ, ತರಬೇತಿ ಪಡೆದುಕೊಂಡ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪರಿವರ್ತನೆಯಾಗಬೇಕೆಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಸಾAಗ್ಲಿ ಅತಿಥಿಗಳಾಗಿ ಆಗಮಿಸಿದ್ದರು. ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಬಿಸಗೊಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸದಾನಂದ ದಬಗಾರ ಎಲ್ಲರನ್ನು ವಂದಿಸಿದರು. ವಿಜ್ಞಾನ ಕೇಂದ್ರದ ಶೈಕ್ಷಣಿಕ ಸಹಾಯಕಿ ಕವಿತಾ ಬಾಡಕರ ಕಾರ್ಯಕ್ರಮ ನಿರೂಪಿಸಿದರು.
ವನ್ಯಜೀವಿ ಅಧ್ಯಯನದಲ್ಲಿ ದಾಂಡೇಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಶಿಕ್ಷಣ ತಜ್ಞ/ಸಂಶೋಧನಾ ಸಹಾಯಕ ಓಂಕಾರ ಪೈ, ಸಸ್ಯ ಅಧ್ಯಯನದಲ್ಲಿ ಸಾಗರದ ಶ್ರೀಮತಿ ಇಂದಿರಾಧಗಾಂಧಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಾನಂದ ಭಟ್ ಹಾಗೂ ಸಾಗರ ಅಧ್ಯಯನದಲ್ಲಿ ಸಾಗರ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ಲತಾ ನಾಯ್ಕ ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯವಾರು ತರಬೇತಿ ನೀಡಿದರು.