ಶಿರಸಿ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಶಿರಸಿಯಲ್ಲಿ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಸಹಯೋಗದಲ್ಲಿ, ಎರಡು ದಿನಗಳ ಹಿಂದೂಸ್ಥಾನಿ ಸಂಗೀತ ವಾದ್ಯಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಈ ಕಾರ್ಯಾಗಾರವು ಅಕ್ಟೋಬರ್ 6 ಮತ್ತು 7 ರಂದು ಶಿರಸಿಯ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ನಡೆಯಲಿದೆ.
ಈ ಕಾರ್ಯಾಗಾರದಲ್ಲಿ ಸಿತಾರ್, ತಬಲಾ ಮತ್ತು ಹಾನಿಯಂ ವಾದ್ಯಗಳ ನುಡಿಸುವಿಕೆಯ ತರಬೇತಿಯನ್ನು ಆಸಕ್ತ ಸಂಗೀತ ವಿದ್ಯಾರ್ಥಿಗಳಿಗೆ ನೀಡಲಾಗುವುದು. ತರಬೇತಿ ನೀಡಲು ಸಂಪನ್ಮೂಲ ಕಲಾವಿದರಾಗಿ ಪ್ರೊ|| ಆರ್. ವಿ. ಹೆಗಡೆ ಹಳ್ಳದ (ಸಿತಾರ್), ಪ್ರೊ|| ಗೋಪಾಲಕೃಷ್ಣ ಹೆಗಡೆ ಕಲಭಾಗ(ತಬಲಾ) ಮತ್ತು ಪಂ| ವ್ಯಾಸಮೂರ್ತಿ ಕಟ್ಟಿ ಬೆಂಗಳೂರು(ಹಾರ್ಮೋನಿಯಂ) ಭಾಗವಹಿಸಲಿದ್ದಾರೆ. ಎಮ್. ಇ. ಎಸ್. ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿ. ಎಮ್. ಹೆಗಡೆ ಮುಳಖಂಡ, ಕಾರ್ಯಾಗಾರದ ಉದ್ಘಾಟನೆಯನ್ನು ಅಕ್ಟೋಬರ್ 6 ಗುರುವಾರ ಬೆಳಿಗ್ಗೆ 10 ಗಂಟೆಗೆ ನೆರವೇರಿಸಲಿದ್ದು, ಅಕಾಡೆಮಿಯ ಅಧ್ಯಕ್ಷ ಅನೂರು ಅನಂತಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ತಬಲಾ ವಾದಕ ಪ್ರೊ|| ಸಂಜೀವ ಪೋತದಾರ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|| ಟಿ. ಎಸ್. ಹಳೆ ಮನೆ ಹಾಗೂ ಎಂ. ಇ. ಎಸ್. ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ರಾಜೇಂದ್ರ ಹೆಗಡೆ ಉಪಸ್ಥಿತರಿರುತ್ತಾರೆ.
ಅಕ್ಟೋಬರ್ 7, ಶುಕ್ರವಾರ ಮಧ್ಯಾಹ್ನ 3:30ಕ್ಕೆ ಕಾರ್ಯಾಗಾರದ ಸಮಾರೋಪ ನಡೆಯಲಿದ್ದು, ಈ ಸಾಲಿನ ‘ಕರ್ನಾಟಕ ಕಲಾಶ್ರೀ’ ಪುರಸ್ಕೃತ ಗಾಯಕ ಪಂ|| ಎಮ್. ಪಿ. ಹೆಗಡೆ ಪಡಿಗೆರೆ ಮತ್ತು ಎಮ್. ಇ. ಎಸ್. ಸಮೂಹ ಸಂಸ್ಥೆಗಳ ಸ್ಥಾಯಿ ಸಮಿತಿ ಸದಸ್ಯ ಲೋಕೇಶ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|| ಟಿ. ಎಸ್. ಹಳೆಮನೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಾಗಾರವು ಉಚಿತವಾಗಿದ್ದು, ಕಾರ್ಯಾಗಾರದಲ್ಲಿ ತರಬೇತಿ ಪಡೆದವರಿಗೆ ಅಕಾಡೆಮಿಯಿಂದ ಪ್ರಮಾಣಪತ್ರ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡು ಪಾಲ್ಗೊಳ್ಳಬಹುದಾಗಿದೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದಾದ ವಿದ್ಯಾರ್ಥಿಗಳ ಸಂಖ್ಯೆ ಸೀಮಿತವಾಗಿರುವುದರಿಂದ ಮೊದಲು ಹೆಸರು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು ನಾಗರಾಜ ಹೆಗಡೆ-8431291651 ಅಥವಾ ಡಾ|| ಕೃಷ್ಣಮೂರ್ತಿ ಭಟ್ಟ-6361363115 ಇವರನ್ನು ಸಂಪರ್ಕಿಸಬಹುದಾಗಿದೆ.