ಕಾರವಾರ : ಮಾನ್ಯ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ ನಿರ್ಮಾಣದ ಕುರಿತಂತೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಇವತ್ತಿನ ದಿನ ಬಹಳ ಶುಭ ದಿನ, ಹಾಗೆಂದು ನಾವು ಆಶಿಸುತ್ತೇವೆ. ಅಂಕೋಲಾ- ಹುಬ್ಬಳ್ಳಿ ರೈಲು ಯಾವಾಗ ಕಾರವಾರ, ಅಂಕೋಲಾ ಬರತ್ತೆ ಎನ್ನುವುದನ್ನು ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದೇವೆ. ಇದಕ್ಕಾಗಿ ಐವತ್ತು ವರ್ಷ ಕೋರ್ಟ್ ನಲ್ಲಿ ಕಳೆದಿದ್ದೇವೆ. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. 50 ಕಿ.ಮೀ. ಮಾರ್ಗ ಕೂಡ ಆಗಿದೆ. ಆದರೆ ದುರಾದೃಷ್ಟವಶಾತ್ ಕೋರ್ಟ್ ನಿಂದ ಕೆಲಸ ನಿಂತಿದೆ.
ಮಹಾರಾಷ್ಟ್ರ ಘಟ್ಟದಲ್ಲಿ, ಕೊಡಗು, ಮಂಗಳೂರು ಘಟ್ಟದಲ್ಲಿ ರೈಲು ಚಲಿಸುತ್ತದೆ, ಗುಜರಾತ್ ಘಟ್ಟದಲ್ಲೂ ರೈಲು ಸಂಚರಿಸುತ್ತದೆ ಅಂತಾದರೆ, ಉತ್ತರಕನ್ನಡ ಜಿಲ್ಲೆಯ 50 ಕಿ.ಮೀ. ಘಟ್ಟದಲ್ಲಿ ಯಾಕೆ ಚಲಿಸುವುದಿಲ್ಲ ಎನ್ನುವುದು ನಮ್ಮ ದೌರ್ಭಾಗ್ಯ. ಕರ್ನಾಟಕದಲ್ಲಿ ಮೂರು ಭಾಗಗಳಿವೆ. ಒಂದು ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ವಂಚಿತ ಪ್ರದೇಶಗಳಿವೆ. ಉತ್ತರಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಹಿಂದುಳಿದಿದೆ. ಎಲ್ಲಿಯವರೆಗೆ ಉತ್ತರ ಕರ್ನಾಟಕ ಉತ್ತರಕನ್ನಡದೊಂದಿಗೆ ಜೋಡಣೆಯಾಗುವುದಿಲ್ಲವೋ ಅಲ್ಲಿಯವರೆಗೂ ಅಭಿವೃದ್ಧಿ ಸಾಧ್ಯವಿಲ್ಲ. ನಮ್ಮಲ್ಲಿ ಬಂದರುಗಳಿವೆ. ಉತ್ತರಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಬಂದರುಗಳಿಲ್ಲ. ಅಲ್ಲಿ ಕೈಗಾರಿಕೆ ನಡೆಸಲು ಪ್ರದೇಶಗಳಿವೆ. ಆದರೆ ರೈಲು ಬರುವವರೆಗೆ ತಮ್ಮಿಂದ ಕಷ್ಟ ಎಂದು ಅಲ್ಲಿನ ಕೈಗಾರಿಕೋದ್ಯಮಿಗಳು ಹೇಳುತ್ತಾರೆ.
ಹೀಗಾಗಿ ನಮ್ಮ ಉತ್ತರಕನ್ನಡ ಹಾಗೂ ಉತ್ತರ ಕರ್ನಾಟಕದ ಜನರ ಆಗ್ರಹಪೂರ್ವಕ ಮನವಿ, ತಮ್ಮ ಸಮಿತಿ ಬಹಳ ಯೋಚಿಸಿ ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗಕ್ಕಾಗಿ ಏನೇನು ಆಗಬೇಕಿದೆಯೋ ಅದೆಲ್ಲವನ್ನು ಮಾಡಿ. ಉತ್ತರಕನ್ನಡ ಹಾಗೂ ಉತ್ತರಕರ್ನಾಟಕದ ಜೋಡಣೆಗಾಗಿ ಪೂರಕವಾಗಿ ಕಾರ್ಯನಿರ್ವಹಿಸಲು ಕೋರುತ್ತೇನೆ.
ರಾಜ್ಯದ ಸಚಿವನಾಗಿಯೂ ವಿನಂತಿ ಮಾಡುತ್ತೇನೆ, ರಾಜ್ಯದ ಅಭಿವೃದ್ಧಿಗೂ ಈ ರೈಲು ಪೂರಕವಾಗಿದೆ. ರಾಷ್ಟ್ರ ಮಟ್ಟದ ನೌಕಾನೆಲೆ ಇಲ್ಲಿದೆ. ಅಲ್ಲಿಗೆ ಅವಶ್ಯವಿರುವ ಸರಕುಗಳನ್ನು ಸಾಗಿಸಕು ರೈಲು ಇಲ್ಲ, ರಸ್ತೆ ಮಾರ್ಗದ ಮೂಲಕ ಸಾಗಣೆಯಾಗುತ್ತಿದೆ. ಆದರೆ ಯಲ್ಲಾಪುರ- ಅಂಕೋಲಾ ರಸ್ತೆಯನ್ನೂ ತಾವು ನೋಡಿದ್ದೀರಿ ಪರಿಸ್ಥಿತಿ ಹೇಗಿದೆ ಎಂದು. ಅಪಘಾತದಲ್ಲಿ ಪ್ರತಿದಿನ ಅಪಘಾತಗಳಾಗಿ ಸಾವನ್ನಪ್ಪುತ್ತಿದ್ದಾರೆ. ನಮಗೆ ದುಃಖವಿದೆ, ಈವರೆಗೆ ರೈಲು ಯೋಜನೆ ಅನುಷ್ಠಾನಗೊಂಡಿಲ್ಲ ಎಂಬುದು. ಹೀಗಾಗಿ ಆದಷ್ಟು ಬೇಗ ಜನರ ಅಹವಾಲುಗಳನ್ನು ಸ್ವೀಕರಿಸಿ, ಜನಪರವಾದ ವರದಿ ಮಂಡಿಸಲು ಕೋರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಸದಸ್ಯರುಗಳಾದ ಡಾ.ಎಚ್.ಎ.ಸಿಂಗ್, ವಿಜಯಕುಮಾರ್ ಭೋಗಿ, ರಾಕೇಶ್ ಜಗ್ಗೇನಿಯಾ, ಪ್ರೊ.ಸುಕುಮಾರ್, ಪ್ರೊ.ನಾಗೇಶ್ ಆರ್.ಅಯ್ಯರ್, ಡಾ.ಜಿ.ವಿ.ಗೋಪಿ, ಡಾ.ಟಿ.ಎನ್.ಮನೋಹರ, ಡಾ.ರಾಜೇಂದ್ರಕುಮಾರ್, ರೈಲ್ವೆ ಇಲಾಖೆಯ ವಿಜಯ ಕೆಟಕೆ, ಅಜಯ್, ದಿನೇಶ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೆನರಾ ವಿಭಾಗದ ಸಿಸಿಎಫ್ ವಸಂತರೆಡ್ಡಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಹಾಗೂ ರೈಲ್ವೆ ಹೋರಾಟ ಸಮಿತಿಗಳ ಪದಾಧಿಕಾರಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.