ಅಂಕೋಲಾ: ಈಗ ಎಲ್ಲಿ ನೋಡಿದರೂ ಚಿಟ್ಟೆಗಳ ಚಿತ್ತಾರ ಕಂಡುಬರುತ್ತಿದೆ. ಹೂವಿನ ಗಿಡದಲ್ಲಿ ಮರಕರಂಧ ಹೀರಲು ತಾಮುಂದು ನಾಮುಂದು ಎನ್ನುವ ಪೈಪೋಟಿಗೆ ಬಿದ್ದಂತೆ ಚಿಟ್ಟೆಗಳು ಹಾರಾಟ ನಡೆಸುತ್ತವೆ. ಹಾಗೇ ಇದು ಸಂತಾನೋತ್ಪತ್ತಿಯ ಕಾಲವಾಗಿದ್ದು, ಜೋಡಿ ಪತಂಗಗಳು ಕೂಡ ಕಣ್ಣಿಗೆ ಸೆರೆಯಾಗುತ್ತವೆ.
ಸಾಮಾನ್ಯವಾಗಿ ಆಗಷ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಚಿಟ್ಟೆಗಳು ಮಿಲನದ ಪ್ರಕ್ರಿಯೆ ಪೂರೈಸಿ, ಮೊಟ್ಟೆ ಇಡುತ್ತವೆ. ಈ ಸಮಯದಲ್ಲಿ ಕಾಡೊಳಗೆ ಕೆಲವು ನಿರ್ದಿಷ್ಟ ಸಸ್ಯಜಾತಿ, ಪೊದೆ, ಬಳ್ಳಿಗಳಲ್ಲಿ ಚಿಟ್ಟೆಗಳು ಇಟ್ಟಿರುವ ಮೊಟ್ಟೆಗಳು ಒಡೆದು ಲಾರ್ವಾಗಳು (ಮರಿ) ಹರಿದಾಡುತ್ತಿರುತ್ತವೆ. ತಾಯಿ ಚಿಟ್ಟೆ ಮರಿಗಳಿಗೆ ಆಹಾರವಾಗಲಿರುವ ನಿರ್ದಿಷ್ಟ ಸಸ್ಯ ಅಥವಾ ಬಳ್ಳಿಯ ಮೇಲೆಯೆ ಮೊಟ್ಟೆ ಇಡುವುದರಿಂದ ಲಾರ್ವಾ ಅದೇ ಪರಿಸರದಲ್ಲಿ ಸುತ್ತಾಡುತ್ತಿರುತ್ತದೆ.
ಲಾರ್ವಾ ಸ್ವಲ್ಪ ದುಂಡನೆಯ ಕಪ್ಪಾದ ಹೊಳೆಯುವ ದೇಹ ಹೊಂದಿರುತ್ತದೆ. ದೇಹದ ಅಂಚಿನಲ್ಲಿರುವ ಸೂಜಿಯಂತಹ ಭಾಗಗಳು ಗುಲಾಬಿ ಬಣ್ಣದ್ದಾಗಿದ್ದು ಆಕರ್ಷಕವಾಗಿರುತ್ತವೆ. ತಲೆಯ ಭಾಗವೂ ಗುಲಾಬಿ ಬಣ್ಣದ್ದಾಗಿದ್ದು ತಲೆಯ ಮೇಲೆ ಎರಡು ಆಂಟೆನಾದಂಥ ಭಾಗವಿರುತ್ತದೆ. ಲಾರ್ವಾ ದೇಹದ ಮೇಲೆ ಐದು ಮತ್ತು ಆರನೆಯ ಭಾಗದ ಮೇಲೆ ಅಡ್ಡಕ್ಕೆ ರೇಖೆ ಎಳೆದಂತೆ ಬಿಳಿಯ ಬಣ್ಣದ ರೇಖೆಯಿರುತ್ತದೆ. ನಿರಂತರವಾಗಿ ಆಹಾರವನ್ನು ಕಬಳಿಸುತ್ತಾ ಲಾರ್ವಾ ಹಲವಾರು ಬಾರಿ ಪೊರೆ ಕಳಚುತ್ತ ಪ್ಯೂಪಾವಸ್ಥೆಗೆ ಸಿದ್ಧವಾಗುತ್ತದೆ. ಪ್ಯೂಪಾವಸ್ಥೆಗೆ ಹೋಗುವ ಮುನ್ನಾದಿನ ಸುರಕ್ಷಿತವಾದ ದೃಢವಾದ ಗಿಡದ ಟೊಂಗೆಗೆ ತನ್ನ ದೇಹದಿಂದ ರೇಷ್ಮೆ ನೂಲಿನಂಥ ದಾರವನ್ನು ಬಿಡುತ್ತಾ ತಲೆಕೆಳಗಾಗಿ ನೇತುಹಾಕಿಕೊಳ್ಳುತ್ತದೆ. ಹಿಂಭಾಗವನ್ನು ಟೊಂಗೆಗೆ ತಾಗುವಂತೆ ಅಂಟಿಸಿಕೊಂಡು ತಲೆಯ ಭಾಗವನ್ನು ಒಂದು ನಿರ್ದಿಷ್ಟ ಅಂತರದಲ್ಲಿರುವಂತೆ ದಾರದಿಂದ ನೇತು ಹಾಕಿಕೊಳ್ಳುತ್ತದೆ. ಟೊಂಗೆಗೂ ಕೋಶಕ್ಕೂ ಇರುವ ದೂರವು ಕೋಶ ಒಡೆದು ಚಿಟ್ಟೆ ಹೊರಬರುವಾಗ ಕಾಲುಗಳಿಂದ ಗಿಡದ ಟೊಂಗೆಯನ್ನು ಹಿಡಿದು ಹೊರಬರಲು ಸಾಧ್ಯವಾಗುವಷ್ಟು ಅಂತರಕ್ಕೆ ಕರಾರುವಾಕ್ಕಾಗಿರುತ್ತದೆ.
ಹೂವಿನಿಂದ ಮಕರಂದ ಹೀರುವ ನಾಳವು ಹುಟ್ಟಿದಾಗ ಎರಡು ಅರ್ಧ ಕೊಳವೆಗಳಂತಿದ್ದು, ಅದರಲ್ಲಿರುವ ಸ್ನಾಯುಗಳನ್ನು ಒಂದಕ್ಕೊಂದು ತಿಕ್ಕಿಕೊಳ್ಳುತ್ತಾ ಬೆಸೆದು ಅದನ್ನೊಂದು ಪರಿಪೂರ್ಣ ಹೀರುಕೊಳವೆಯ ರೂಪಕ್ಕೆ ತರುತ್ತದೆ. ಈ ವೇಳೆಗೆ ದೇಹದಲ್ಲಿ ಸೂರ್ಯನ ಬೆಳಕಿನ ಕಾರಣದಿಂದ ಶಕ್ತಿ ಸಂಚಯವಾಗುವುದರಿಂದ ಟೊಂಗೆಗೆ ನೇತಾಡುವುದನ್ನು ಬಿಟ್ಟು, ಮೇಲೇರಿ ಕುಳಿತುಕೊಳ್ಳುತ್ತದೆ. ಆನಂತರ ಮೆಲ್ಲನೆ ರೆಕ್ಕೆಯನ್ನು ಪಟಪಟ ಆಡಿಸುತ್ತದೆ ಹಾರುವ ತಯಾರಿ ನಡೆಸುತ್ತದೆ. ರೆಕ್ಕೆ ಸಾಕಷ್ಟು ದೃಢವಾದ ಅನಂತರ ರೆಕ್ಕೆ ಬಡಿಯುತ್ತಾ ಕುಪ್ಪಳಿಸುತ್ತಾ ಸೂರ್ಯನ ಬೆಳಕು ತೀಕ್ಷ್ಣವಾಗಿರುವ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಅನಂತರ ಒಮ್ಮೆ ರೆಕ್ಕೆಯನ್ನು ಬಡಿಯುತ್ತಾ ಹಾರಿ ತನ್ನ ಜೀವನವನ್ನು ಅರಸಿಕೊಂಡು ಹೋಗುತ್ತದೆ.