ಕಾರವಾರ: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಇನ್ಮುಂದೆ ಆಯಾ ಕಂದಾಯ ವೃತ್ತದ ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಬೇಕು. ಇಲ್ಲದಿದ್ದರೇ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗ, ಹೊಬಳಿ ಮಟ್ಟದಲ್ಲಿ ಕಂದಾಯ ನಿರೀಕ್ಷಕ, ಉಪತಹಶೀಲ್ದಾರ್ ಗಳನ್ನ ನೇಮಕ ಮಾಡಲಾಗಿರುತ್ತದೆ. ಆದರೆ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯದಲ್ಲಿರದೇ ಇರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಕಛೇರಿ ವೇಳೆಯಲ್ಲಿ ಲಭ್ಯವಾಗುತ್ತಿಲ್ಲ, ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಅದರಲ್ಲೂ ಅಧಿಕ ಮಳೆ, ನೆರೆ, ಕೊರೋನಾದಂತಹ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿ ಇರದೇ ಹಲವೆಡೆ ಸಮಸ್ಯೆ ಎದುರಾದ ಘಟನೆ ಸಹ ನಡೆದಿದ್ದವು. ಇನ್ನು ದಾಖಲೆಗಳನ್ನ ಗ್ರಾಮ ಚಾವಡಿಗೆ ತೆರಳಿ ಪಡೆಯಬೇಕಾದರೆ ತಿಂಗಳುಗಟ್ಟಲೇ ಕಾಯಬೇಕು. ಸಿಬ್ಬಂದಿಗಳು ಕಚೇರಿಗೆ ಬರುವುದಿಲ್ಲ ಎನ್ನುವ ಆರೋಪಗಳು ಸಾಕಷ್ಟು ಕೇಳಿ ಬಂದಿದ್ದವು.
ಈ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಕಡ್ಡಾಯವಾಗಿ, ಆಯಾ ಕೇಂದ್ರ ಸ್ಥಾನದಲ್ಲಿಯೇ ಉಳಿಯಬೇಕು. ಇಲ್ಲದಿದ್ದರೇ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಸಂಬಂಧಪಟ್ಟ ಆಯಾ ತಹಶೀಲ್ದಾರ್ ಗಳು ಈ ಕುರಿತು ಪರಿಶೀಲನೆ ನಡೆಸಿ ಒಂದೊಮ್ಮೆ ದೂರುಗಳು ಲೋಪದೋಷಗಳು ಕಂಡು ಬಂದಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ತಿಳಿಸಲಾಗಿದೆ.
ಇನ್ನು ಸರ್ಕಾರದ ಆದೇಶವನ್ನ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಒಂದು ವೇಳೆ ಸಾರ್ವಜನಿಕರಿಗೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿ ಕಚೇರಿಯ ವೇಳೆಯಲ್ಲಿ ಲಭ್ಯವಾಗದೇ ಕೆಲಸ ಕಾರ್ಯಗಳಿಗೆ ತೊಂದರೆಯಾಗಿರುವುದನ್ನ ಖಚಿತಪಡಿಸಿಕೊಂಡು ಅಂತವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ ಹರೀಶ್ ಆದೇಶಿಸಿದ್ದಾರೆ.
ನಗರ ಪ್ರದೇಶದಲ್ಲಿರುವ ಕಚೇರಿಗೆ ಡೆಪ್ಯುಟೇಶನ್…: ಹಲವು ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ನಗರ ಪ್ರದೇಶದಲ್ಲಿರುವ ಕಚೇರಿಗಳಲ್ಲಿ ಡೆಪ್ಯುಟೇಶನ್ ಮೇಲೆ ಕೆಲಸ ಮಾಡುತ್ತಿರುವುದು ಈ ಸಮಸ್ಯೆಗೆ ಮೂಲ ಕಾರಣ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಿಗನಾಗಿ ನೇಮಕ ಗೊಂಡಿರುವ ಹಲವರನ್ನ ಸಿಬ್ಬಂದಿ ಕೊರತೆ ಎಂದು ತಹಶೀಲ್ದಾರ್, ಸಹಾಯಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಡೆಪ್ಯುಟೇಶನ್ ಮಾಡಿರಲಾಗುತ್ತಿದೆ.
ಅಲ್ಲದೇ ಹಲವರು, ಅದರಲ್ಲೂ ಮಹಿಳಾ ಸಿಬ್ಬಂದಿಗಳು ಗ್ರಾಮೀಣ ಭಾಗದಿಂದ ಓಡಾಟ ನಡೆಸಲು ಕಷ್ಟ ಎನ್ನುವ ಕಾರಣ ನೀಡಿ ನಗರ ಪ್ರದೇಶದ ಕಚೇರಿಗಳಿಗೆ ಡೆಪ್ಯುಟೇಶನ್ ಮಾಡಿಸಿಕೊಳ್ಳುತ್ತಿರುವುದು, ಜೊತೆಗೆ ಸಿಬ್ಬಂದಿ ಕೊರತೆಯಿಂದ ಪ್ರಭಾರ ಹುದ್ದೆಯನ್ನ ನೀಡುತ್ತಿರುವುದು ಗ್ರಾಮ ಚಾವಡಿಗಳಲ್ಲಿ ಗ್ರಾಮ ಲೆಕ್ಕಿಗರು ಇರದೇ ಕೇವಲ ಉಗ್ರಾಣಿಗಳು ಮಾತ್ರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.