ಶಿರಸಿ: ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಅನುಷ್ಠಾನವಾಗಲೇಬೇಕು. ಸೀಬರ್ಡ್, ಕೈಗಾ, ಕಾಳಿ ಯೋಜನೆಗಳಿಗೆ ಸಹಕಾರ ನೀಡಿ, ಉತ್ತರ ಕನ್ನಡದ ಜನತೆ ತಮ್ಮ ವಾಸಸ್ಥಳಗಳೊಂದಿಗೆ, ಅರಣ್ಯಭೂಮಿಗಳನ್ನ ಕಳೆದುಕೊಂಡಿದ್ದೇವೆ. ಇದೀಗ ಉತ್ತರಕರ್ನಾಟಕ- ಉತ್ತರಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ರೈಲ್ವೆ ಯೋಜನೆಗೆ ಎಲ್ಲರೂ ಪಕ್ಷಾತೀತವಾಗಿ ಒಂದಾಗಬೇಕಿದೆ ಎಂದು ಮಾಜಿ ಸಚಿವ, ಹಾಲಿ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಇಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಮಾತ್ರವಲ್ಲ, ಪೂರ್ಣ ಉತ್ತರಕರ್ನಾಟಕಕ್ಕೆ ಲಾಭವಾಗಲಿದೆ. ಉತ್ತರಕರ್ನಾಟಕ ಕೂಡ ಬಹಳ ಹಿಂದುಳಿದಿದ್ದು, ರೈಲ್ವೆ ಯೋಜನೆ ಅನುಷ್ಠಾನಗೊಂಡರೆ ವ್ಯಾಪಾರ, ಕೈಗಾರಿಕೆ, ಪ್ರವಾಸೋದ್ಯಮ ಬೆಳೆಯಲು ಸಾಕಷ್ಟು ಅವಕಾಶವಿದೆ ಎಂದರು.
ಅಂತೆಯೇ ಪರಿಸರ ಸಂರಕ್ಷಣೆಯೂ ಆಗಬೇಕು, ಆಗಬಾರದು ಎನ್ನುವ ಜನತೆ ನಾವಲ್ಲ. ಉತ್ತರ ಕನ್ನಡ ಜಿಲ್ಲೆಯ ಜನ ಪರಿಸರ ಉಳಿಸಿದ್ದಾರೆ. ಹುಬ್ಬಳ್ಳಿಯಿಂದ ಕಲಘಟಕಿಯವರೆಗಿನ ಈ ರೈಲ್ವೆ ಯೋಜನೆಯ ಪ್ರಾಥಮಿಕ ಹಂತ ಮುಗಿದಿದೆ. ರೈಲ್ವೆ ಆಗದಿದ್ದರೆ ಹೆಚ್ಚು ವಾಹನಗಳು ಓಡಾಡುವ ಹುಬ್ಬಳ್ಳಿ- ಅಂಕೋಲಾ- ಕಾರವಾರ ಹೆದ್ದಾರಿ ವಿಸ್ತರಣೆ ಮಾಡಬೇಕಾಗುತ್ತದೆ. ಈ ವೇಳೆ ಪರಿಸರಕ್ಕೆ ಇನ್ನೂ ಹೆಚ್ಚು ಹಾನಿಯಾಗಲಿದೆ. ರೈಲ್ವೆ ಯೋಜನೆ ವಿಳಂಬವಾಗಿ ಈಗಾಗಲೇ ಬಹಳ ಹಾನಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ರೈಲ್ವೆ ಯೋಜನೆ ಅನುಷ್ಠಾನಕ್ಕೆ ಎಲ್ಲರ ಸಹಕಾರ ಬೇಕು. ಈಗಾಗಲೇ ಹೈಕೋರ್ಟ್ ಕಮಿಟಿಯೊಂದನ್ನು ನೇಮಿಸಿದ್ದು, ಯೋಜನೆಯಿಂದ ಎಷ್ಟು ದುಷ್ಪರಿಣಾಮ ಆಗಲಿದೆ ಹಾಗೂ ಇತರ ಸಾಧ್ಯತೆಗಳ ಬಗ್ಗೆ ವರದಿ ನೀಡಲು ಸೂಚಿಸಿದೆ. ಅದರಂತೆ ನಿನ್ನೆಯಿಂದ ಈ ಕಮಿಟಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದೆ. ಪ್ರಧಾನಿ, ರೈಲ್ವೆ ಮತ್ತು ಪರಿಸರ ಸಚಿವರಿಗೆ ಈಗಾಗಲೇ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಪತ್ರ ಬರೆದು ಒತ್ತಾಯಿಸಿದ್ದೇನೆ ಎಂದು ದೇಶಪಾಂಡೆ ತಿಳಿಸಿದರು.
ಸೆ.30ರಿಂದ ಕರ್ನಾಟಕದಲ್ಲಿ ಭಾರತ್ ಜೋಡೋ: ಭಾರತದಲ್ಲಿ ಐಕ್ಯತೆ ಮೂಡಿಸುವ ಮೂಲಕ ಜನರಲ್ಲಿ ಪ್ರೀತಿ- ವಿಶ್ವಾಸ ಮೂಡಿಸುವಂತೆ ಮಾಡಲು ದೇಶದಾದ್ಯಂತ ಕೈಗೊಂಡಿರುವ ಭಾರತ್ ಜೋಡೋ ಪಾದಯಾತ್ರೆಯು ಕರ್ನಾಟಕದಲ್ಲಿ ಸೆ.30ರಿಂದ ನಡೆಯಲಿದೆ ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು.
ನಮ್ಮ ಜಿಲ್ಲೆಯ ಆರೂ ಕ್ಷೇತ್ರದಿಂದಲೂ ಸಾವಿರಾರು ಸಂಖ್ಯಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮ ಪ್ರಪಂಚದಲ್ಲಿ ನಡೆಯುವ ಅಪರೂಪದ ಕಾರ್ಯಕ್ರಮವಾಗಿದೆ. ದೇಶದಲ್ಲಿ ಮತ್ಸರ, ದ್ವೇಷ, ಮತೀಯ ಕಲಹ ಪ್ರತಿ ದಿನ ಬೆಳೆಯುತ್ತಿದ್ದು ಇದು ರಾಷ್ಟ್ರದ ಅಸ್ತಿರತೆಗೆ, ವಿಶ್ವಾಸದ ಕೊರತೆಗೆ ಕಾರಣವಾಗುತ್ತಿದೆ. ದೇಶದ ಬಗ್ಗೆ ಗೌರವ ವಿಶ್ವದಲ್ಲಿ ಕಡಿಮೆ ಆಗುತ್ತಿದೆ. ದೇಶ ಎಂದೂ ಈ ಸ್ಥಿತಿಗೆ ಬಂದಿರಲಿಲ್ಲ. ಎಲ್ಲ ಧರ್ಮದ ಜನರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂಬುದು ಯಾತ್ರೆಯ ಉದ್ದೇಶ ಎಂದರು.
ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಇಂತಹ ಪರಿಸ್ಥಿತಿ ಹಿಂದೆಂದೂ ಇಲ್ಲವಾಗಿತ್ತು. ಸರ್ಕಾರ ಪ್ರಾಧಾನ್ಯತೆ ಮೇಲೆ ಹಣ ಬಿಡುಗಡೆ ಮಾಡಿ ಅಭಿವೃದ್ಧಿಪಡಿಸಬೇಕು. ಸರ್ಕಾರ ಜೀವಂತ ಇದೆಯೋ ಇಲ್ಲವೋ ಎಂಬ ಪ್ರಶ್ನೆ ಮೂಡುವ ಸ್ಥಿತಿ ಬಂದಿದೆ. ಭ್ರಷ್ಟಾಚಾರ ನೋಡಿ ನೋವಾಗುತ್ತಿದೆ. ನಮ್ಮ ಕಾಲದಲ್ಲಿ ಭ್ರಷ್ಟಾಚಾರವಾಗಿದ್ದರೆ ದಯವಿಟ್ಟು ತನಿಖೆ ನಡೆಸಲೆಂದು ಸಿದ್ದರಾಮಯ್ಯನವರೇ ಸದನದಲ್ಲಿ ಹೇಳಿದ್ದಾರೆ. ಹಾಗಂತ ನೀವು ತನಿಖೆಗೆ ಸಿದ್ಧರಿದ್ದೀರಾ? ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಎಲ್ಲಿ ಆಗುತ್ತದೆ ಎನ್ನುವುದಕ್ಕಿಂತ ಹೆಚ್ಚಿನ ಜನ ಲಭ್ಯವಾಗುವ ಸ್ಥಳದಲ್ಲಿ ಆಗಬೇಕು. ಸರ್ಕಾರ ಶಾಸನ ಸಬೆಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿದೆ. ಆದಷ್ಟು ಬೇಗ ರೂಪುರೇಷೆ ಸಿದ್ಧಪಡಿಸಲಿ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅದ್ಯಕ್ಷ ಭೀಮಣ್ಣ ಟಿ.ನಾಯ್ಕ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ್ರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜ್ಯೋತಿ ಗೌಡಾ ಪಾಟೀಲ್, ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಫ್.ನಾಯ್ಕ, ಎಸ್ಸಿ- ಎಸ್ಟಿ ಅಧ್ಯಕ್ಷ ಬಸವರಾಜ ದೊಡ್ಮನಿ, ಜಿಲ್ಲಾ ಮಾಧ್ಯಮ ವಕ್ತಾರ ದೀಪಕ್ ದೊಡ್ಡೂರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಇದ್ದರು.