ಕಾರವಾರ: ಜಿಲ್ಲೆಯು ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ರೈಲು ಮಾರ್ಗ ಕಾಮಗಾರಿ ಪ್ರಾರಂಭವಾಗುವುದು ಅವಶ್ಯಕವಾಗಿದ್ದು, ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯು ಸಹ ಇದಾಗಿದೆ ಎಂದು ಕೇಂದ್ರದ ರೈಲ್ವೇ ಯೋಜನಾ ಸಮಿತಿ ಅಭಿಪ್ರಾಯಿಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜರುಗಿದ ಹುಬ್ಬಳ್ಳಿ-ಅಂಕೋಲಾ ರೈಲಿನ ಬೇಡಿಕೆಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಕೇಂದ್ರ ರೈಲ್ವೇ ಯೋಜನಾ ಸಮಿತಿಯ ಅಧಿಕಾರಿಗಳು ಮೇಲಿನ ರೀತಿ ಅಭಿಪ್ರಾಯಕ್ಕೆ ಬಂದರು. ರೈಲ್ವೇ ಯೋಜನೆಯ ಸಾಧಕ ಬಾಧಕ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಯಿತು.
ರೈಲ್ವೇ ಯೋಜನೆಯಿಂದಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಗುವುದು. ವನ್ಯಪ್ರಾಣಿಗಳ ವಾಸಸ್ಥಾನದ ಪಲ್ಲಟವಾಗುವ ಆತಂಕವಿದೆ. ಅರಣ್ಯ ನಾಶದಿಂದ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರಿನ ಹರಿವಿನ ದಿಕ್ಕು ಬದಲಾವಣೆಯಾಗುವುದರಿಂದ ನೀರಿನ ಹಂಚಿಕೆಯಲ್ಲಿ ಅಭಾವ ಸೃಷ್ಠಿಯಾಗಬಹುದು. ಗುಡ್ಡ ಕುಸಿತ ಪ್ರದೇಶಗಳಲ್ಲಿ ಈ ಯೋಜನೆ ಫಲದಾಯಕವಲ್ಲ ಎಂಬ ಅಭಿಪ್ರಾಯ ಸಲಹಾ ಸಮಿತಿಯಿಂದ ವ್ಯಕ್ತವಾಯಿತು.
ಕೇಂದ್ರ ರೈಲ್ವೇ ಯೋಜನೆ ಸಮಿತಿ ಅಧಿಕಾರಿಗಳು ಯೋಜನೆಯ ಕುರಿತಾಗಿ ಮಾತನಾಡಿ, ಈ ಯೋಜನೆಯು ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಉತ್ತಮವಾದ ಯೋಜನೆಯಾಗಿದೆ. ಜನಸಂಚಾರ, ಸರಕು ಸಾಗಣೆಗೆ ಹಾಗೂ ಸಮಯದ ಉಳಿತಾಯವಾಗುವುದರಿಂದ ಈ ಯೋಜನೆಯನ್ನು ಜಿಲ್ಲೆಯ ಜನ ಸ್ವಾಗತಿಸುತ್ತಾರೆ. ಅಭಿವೃದ್ಧಿ ಕಾರಣದಿಂದಾಗಿ ಕೆಲವು ಬದಲಾವಣೆಗಳಿಗೆ ಒಪ್ಪಿಕೊಳ್ಳುವಂತ ನಿರ್ಧಾರಕ್ಕೆ ಬರಲೇಬೇಕು ಎಂದು ತಿಳಿಸಿದರು.
ಬಹುಕೋಟಿ ವೆಚ್ಚದ ಯೋಜನೆ ಇದಾಗಿರುವುದರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆ ಕಾಣಬಹುದಾಗಿದೆ. ವಿಪತ್ತು ನಿರ್ವಹಣೆ ಮಾಡುವಲ್ಲಿ ಅಗತ್ಯ ಕಾರ್ಯಸೂಚಿಗಳನ್ನು ಅಳವಡಿಸಿಕೊಳ್ಳಬೇಕು. ರೈಲ್ವೇ ಮಾರ್ಗವನ್ನು ಮಾಡುವ ಸಂದರ್ಭದಲ್ಲಿ ನಿಗದಿತ ಅಂತರದಲ್ಲಿ ಟನ್ನೆಲ್‌ಗಳನ್ನು, ರೈಲ್ವೇ ಕ್ರಾಸಿಂಗ್ ನಿರ್ವಹಿಸುವ ಮೂಲಕ ಹೆಚ್ಚಿನ ಪ್ರಮಾಣದ ಅರಣ್ಯ ನಾಶವನ್ನು ತಡೆಗಟ್ಟಬಹುದಾಗಿದೆ. ಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗದುದ್ದಕ್ಕೂ ಅಗತ್ಯ ಪರ್ಯಾಯ ವ್ಯವಸ್ಥೆಯನ್ನು ಒದಗಿಸಿ ಪ್ರಾಣಿ ಜೀವಹಾನಿಯನ್ನು ತಡೆಗಟ್ಟಬೇಕು. ಯೋಜನೆಯ ಮಾರ್ಗಕ್ಕೆ ಪೂರಕವಾಗಿ ರಸ್ತೆ ಸಂಪರ್ಕ, ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸರ್ವ ಋತು ಯೋಗ್ಯವಾದ ರೀತಿಯಲ್ಲಿ ರೈಲ್ವೇ ಕಾಮಗಾರಿ ಯೋಜನೆ ಅನುಷ್ಠಾನಗೊಳ್ಳಲು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.
ಈ ಸಭೆಯಲ್ಲಿ ರೈಲ್ವೇ ಯೋಜನಾ ಸಮಿತಿ ಅಧಿಕಾರಿಗಳಾದ ಡಾ.ಎಚ್.ಎಸ್.ಸಿಂಗ್, ಭಾರತೀಯ ಅರಣ್ಯ ಸೇವಾ ಸಿಡಬ್ಲೂö್ಯಎಲ್‌ಡಬ್ಲೂö್ಯ ವಿಜಯಕುಮಾರ, ಭಾರತೀಯ ಅರಣ್ಯ ಸೇವಾ ಡಿಐಜಿ ರಾಕೇಶ, ಡಾ. ರಾಜೇಂದ್ರ ಕುಮಾರ, ಡಾ.ಟಿ.ಎನ್. ಮನೋಹರ, ಪ್ರೋ. ನಾಗೇಶ್, ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಎಂ.ಪಿ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಕಾರವಾರ ವಿಭಾಗದ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಹಾಗೂ ಇತರ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.