ಶಿರಸಿ : ಅಖಿಲ ಭಾರತ ಪ್ರಜ್ಞಾಪ್ರವಾಹ ಸಂಘಟನೆ ಹಾಗೂ ಆಸ್ಸಾಂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆದ ಲೋಕಮಂಥನದ 3ನೇ ರಾಷ್ಟ್ರೀಯ ಸಮ್ಮೇಳನವು ಇತ್ತೀಚೆಗೆ ಅಸ್ಸಾಂನ ಗೌಹಾತಿಯಲ್ಲಿ ನಡೆಯಿತು. ದೇಶದ ಎಲ್ಲ ರಾಜ್ಯಗಳಿಂದ ಒಟ್ಟಾರೆ 2000 ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸಮ್ಮೇಳನದಲ್ಲಿ ಜೀವವೈವಿಧ್ಯ ಜನಪದ, ನೈಸರ್ಗಿಕ ಸಂಪನ್ಮೂಲ, ದೇಶೀ ಸಂಸ್ಕೃತಿ, ಕೃಷಿಪದ್ದತಿ, ಹಬ್ಬಗಳು, ಕಲೆಗಳು, ವನವಾಸಿ ಪದ್ಧತಿ, ಸಂಗೀತ, ದೇಶೀ ವಿಜ್ಞಾನ ಸೇರಿದಂತೆ 12 ಸಮಾವೇಶಗಳು ನಡೆದವು.
ಜೀವವೈವಿಧ್ಯ, ನದಿಕಣಿವೆ, ಅರಣ್ಯಗಳ ಸಂರಕ್ಷಣೆ, ಭಾರತೀಯ ಪರಂಪರೆಯ ಕೊಡುಗೆ, ಮುಂದಿರುವ ಸವಾಲುಗಳು, ನಡೆದಿರುವ ಪ್ರಯೋಗಗಳು ಕುರಿತು ಲೋಕಮಂಥನ ಸಮಾವೇಶದಲ್ಲಿ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮುಖ್ಯ ಅತಿಥಿಗಳಾಗಿ ಮಾರ್ಗದರ್ಶನ ಮಾಡಿದರು. ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ನಡೆಸಿರುವು ಪ್ರಯೋಗಗಳು, ಯಶೋಗಾಥೆಗಳನ್ನು ಮಂಡಿಸಿದರು. ಗ್ರಾಮ ಸಾಮಾಹಿಕ ಭೂಮಿ, ಕೆರೆ, ನದಿ ಮೂಲಗಳ ಸಂರಕ್ಷಣೆ, ದೇವರಕಾಡುಗಳು, ಮಿರಿಸ್ಟಿಕಾಸ್ವಾಂಪ್ ಸುಸ್ಥಿರ ಇಂಧನ, ಗ್ರಾಮ ಅರಣ್ಯ ಸಮಿತಿ, ವೃಕ್ಷಪೂಜೆ, ವೃಕ್ಷ ಉಡುಗೊರೆ, ವೃಕ್ಷ ಮಂತ್ರಾಕ್ಷತೆ, ಜೀವವೈವಿಧ್ಯ ಸಮಿತಿ, ವನೌಷಧಿ ಶಿಬಿರಗಳು, ಹಸಿರು ಕವಚ, ವೃಕ್ಷಾರೋಪಣ ಅಭಿಯಾನ, ಜೀವವೈವಿಧ್ಯ ದಾಖಲಾತಿ ಸೇರಿದಂತೆ ಹಲವು ಜಂಟಿ ಯೋಜನೆಗಳು ತಳಮಟ್ಟದ ಕಾರ್ಯಗಳು, ರಚನಾತ್ಮಕ ಜನಾಂದೋಲನಗಳ ಪರಿಚಯ ಮಾಡಿ ಅನುಭವ ಹಂಚಿಕೊಂಡರು.
ಲೋಕ ಪರಂಪರೆ ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸಿವೆ. ಅದೇ ರೀತಿ ದೇಶದ ನಿಸರ್ಗ ಸಂಪತ್ತಿನ ಶೋಷಣೆ ತಪ್ಪಿಸಲು ನಮ್ಮ ಪಾರಂಪರಿಕ ಪದ್ಧತಿಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಕರೆ ನೀಡಿದರು.
ಪಾರಂಪರಿಕ ಜೀವವೈವಿಧ್ಯ ತಾಣಗಳನ್ನು ದೇಶದ ಪ್ರತಿ ರಾಜ್ಯದಲ್ಲಿ ತಲಾ 10 ಸ್ಥಳಗಳನ್ನು ಗುರುತಿಸಿ ಘೋಷಿಸಬೇಕು. ಪಾರಂಪರಿಕ ವೃಕ್ಷಗಳನ್ನು ಸಂರಕ್ಷಿಸಬೇಕು. ದೇವರ ಕಾಡುಗಳು, ನದೀ ಮೂಲಗಳು, ಗೋಮಾಳ, ಅಮೃತ ಮಹಲ್ ಕಾವಲ್, ವನವಾಸೀ, ಜನಪದಗಳ ಸಂರಕ್ಷಣಾ ಯೋಜನೆಗಳನ್ನು ಜನ ಸಹಭಾಗಿತ್ವದಲ್ಲಿ ಜಾರಿ ಮಾಡಬೇಕು. ದೇಶೀ ಕೃಷಿ, ಜಾನುವಾರು ತಳಿಗಳ ಉಳಿವಿಗೆ ಪ್ರತ್ಯೇಕ ಯೋಜನೆ ಜಾರಿ ಮಾಡಬೇಕು ದೇಶೀ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಎಲ್ಲ ರಾಜ್ಯಸರ್ಕಾರಗಳು ಜಾರಿಗೆ ತರಬೇಕು ಎಂದು ಅಶೀಸರ ತಜ್ಞ ಶಿಫಾರಸು ಸಲಹೆ ಮಂಡಿಸಿದರು. ವಿಶೇಷವಾಗಿ ಆಸ್ಸಾಂ, ಮೇಘಾಲಯ, ಮಣಿಪುರ, ತ್ರಿಪುರ, ಸೇರಿದಂತೆ ಅರಣ್ಯ ಕಣಿವೆಗಳ ಉತ್ತರಾಂಚಲ ರಾಜ್ಯಗಳಲ್ಲಿ ಅರಣ್ಯ, ಜೀವ ವೈವಿಧ್ಯ ನಾಶ ತಪ್ಪಿಸಲು ವಿಶೇಷ ಗಮನ, ಯೋಜನೆಗಳು ಜಾರಿ ಆಗಬೇಕು ಎಂದು ಕರ್ನಾಟಕದ ಪಶ್ಚಿಮ ಘಟ್ಟ ಕರ್ಯಪಡೆ ಹಾಗೂ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಅನಂತ ಅಶೀಸರ ನೀತಿ ನಿರೂಪಕರನ್ನು ಒತ್ತಾಯಿಸಿದರು. ಆಸ್ಸಾಂ ಸರ್ಕಾರದ ಪರಿಸರ ಜೀವವೈವಿಧ್ಯ ಸಲಹೆಗಾರ ಪ್ರೋ. ಪರಿಮಳ ಭಟ್ಟಾಚರ್ಯ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ದೇಶದ ವಿವಿಧ ರಾಜ್ಯಗಳಿಂದ ಬಂದ ಜಾನಪದ ತಂಡಗಳು, ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ವನವಾಸಿ,ಕೃಷಿಕ ಸಂಘಟನೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಇತಿಹಾಸ, ಜನಪದ ವಿದ್ವಾಂಸರು ಭಾಗವಹಿಸಿದ್ದ ಲೋಕಮಂಥನ ಸಮ್ಮೆಳನ ವನ್ನು ಸನ್ಮಾನ ಉಪರಾಷ್ಟ್ರಪತಿಗಳು ಉದ್ಘಾಟಿಸಿದರು. ಆಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ವಿಶ್ವಾಸ ಶರ್ಮ ಪ್ರಜ್ಞಾಪ್ರವಾಹ ರಾಷ್ಟ್ರೀಯ ಸಂಚಾಲಕ ಕೇರಳದ ನಂಧಕುಮಾರ್, ಆಸ್ಸಾಂ ರಾಜ್ಯದ ಮಾನ್ಯ ರಾಜ್ಯಪಾಲರು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನನೀಯ ಸರಕಾರ್ಯವಾದ ದತ್ತಾತ್ರೇಯ ಹೊಸಬಾಳೆ ಸಮಾರೋಪ ಭಾಷಣ ಮಾಡಿದರು. ಕೇರಳದ ರಾಜ್ಯಪಾಲ ಮಾನ್ಯ ಅರೀಫ್ ಮಹಮ್ಮದ ಖಾನ ಮುಖ್ಯ ಅತಿಥಿಗಳಾಗಿದ್ದರು. ಕರ್ನಾಟಕದಿಂದ ಯಕ್ಷಗಾನ, ಜೋಗತಿ ನೃತ್ಯ ತಂಡಗಳು ಭಾಗವಹಿಸಿದ್ದವು. ಜನಪದ ತಜ್ಞ ಪ್ರೋ. ಕೃಷ್ಣಯ್ಯ, ಲೇಖಕ ಬಿ.ಜಿ.ಹರೀಶ, ಜನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಪ್ರಜ್ಞಾಪ್ರವಾಹದ ದಕ್ಷಿಣ ಭಾರತ ಸಂಚಾಲಕರಾದ ರಘುನಂದನ್ ಮುಂತಾದವರು ಭಾಗವಹಿಸಿದ್ದರು. ಪದ್ಮಶ್ರೀ ಡಾ| ಕಪಿಲ್ ತಿವಾರಿ, ಡಾ| ಸುಖದೇವ, ಪದ್ಮಭೂಷಣ, ಡಾ| ಸೋನಾಲಿಮಾನಸಿಂಗ್, ಡಾ| ಪಂಕಜ ಸಕ್ಸನಾ, ಪ್ರೊ. ಮುಕುಂದ ದಾತಾರ್, ಗಿರೀಶ ಪ್ರಭುಣೆ, ಮೊದಲಾದ ಖ್ಯಾತ ಲೇಖಕರು, ಅಧಿಕಾರಿಗಳು, ಸಂಶೋಧಕರು, ಸಾಮಾಜಿಕ ಸೇವಾ ಕಾರ್ಯಕರ್ತರು ಮಾರ್ಗದರ್ಶನ ನೀಡಿದರು. ದೇಶದ ವನವಾಸಿ ಜನಪದ ಕಲೆ ಬಿಂಬಿಸುವ ಪ್ರದರ್ಶಿನಿಯನ್ನು ಲಕ್ಷಾಂತರ ಜನ ವೀಕ್ಷಿಸಿದರು.