ಕಾರವಾರ: ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಕ್ಕೆ ನಾನು ಪ್ರಯತ್ನಿಸುತ್ತಿದ್ದೇನೆ. ಇದರಿಂದ ಅವರ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಮಂಡ್ಯದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೋತ್ಸವ, 43ನೇ ರಾಜ್ಯಮಟ್ಟದ ಜಾನಪದ ಕಲಾಮೇಳ, ಚುಂಚಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮುಂದುವರಿದು ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹೆಚ್ಚನ ಸಂಖ್ಯೆಯಲ್ಲಿದ್ದಾರೆ. ಅವರು ಕಡುಬಡತನದಲ್ಲೇ ತಮ್ಮ ಶ್ರೀಮಂತ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದಿಚುಂಚನಗಿರಿ ಮಠ ಹಾಲಕ್ಕಿ ಸಮಾಜದ ನೆರವಿಗೂ ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನವು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ, ಜಾನಪದ ಮತ್ತಿತರ ಕ್ಷೇತ್ರಗಳಲ್ಲಿ ನಾಡಿಗೇ ಮಾದರಿಯಾಗಿದೆ. ಯಾವ ದೇಶ, ಯಾವ ರಾಜ್ಯ, ಯಾವ ಸಂಸ್ಥೆ ಧಾರ್ಮಿಕ ತಳಹದಿಯ ಮೇಲೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದೋ ಅಲ್ಲಿ ಖಂಡಿತ ಯಶಸ್ಸು ಸಾಧ್ಯ. ಅದಕ್ಕೇ ನಾವು ರಾಮರಾಜ್ಯವನ್ನು ಪ್ರತಿಪಾದಿಸುತ್ತೇವೆ. ಶ್ರೀ ಆದಿಚುಂಚನಗಿರಿ ಮಠವು ಇದೇ ರೀತಿಯಲ್ಲಿ ಅಂದರೆ ಧಾರ್ಮಿಕ ತಳಹದಿಯ ಮೇಲೆ ಸಮಾಜಕಟ್ಟುತ್ತಿರುವುದು ಆದರ್ಶಪ್ರಾಯವಾದುದು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ದಿವ್ಯ ಆಶೀರ್ವಾದಗಳೊಂದಿಗೆ ಮಠದ ಪೀಠಾಧ್ಯಕ್ಷರಾದ ಶ್ರಿ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಷ್ಕೀ ಮಠವು ಸಮಾಜಸೇವೆಯಲ್ಲಿ ನಿರತವಾಗಿದೆ ಎಂದು ಬಣ್ಣಿಸಿದರು.
ಮಠದ ಪ್ರಸನ್ನಾನಂದ ಸ್ವಾಮೀಜಿ, ವಿವಿಧ ಶಾಖಾಮಠದ ಶ್ರೀಗಳು, ಗಣ್ಯರು ಪಾಲ್ಗೊಂಡಿದ್ದರು.
ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ: ಸಮಾರಂಭದಲ್ಲಿ ವೃಕ್ಷಮಾತೆ ತುಳಸಿ ಗೌಡ ಸೇರಿದಂತೆ ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ, ಸತ್ಕರಿಸಲಾಯಿತು. ಪದ್ಮಶ್ರೀ ತುಳಸಿ ಗೌಡ ನನ್ನ ಕ್ಷೇತ್ರದ ಹೆಮ್ಮೆಯ ಸಾಧಕಿ. ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಿರುವುದು ಅತ್ಯಂತ ಖುಷಿ ತಂದಿದೆ. ಅದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುವುದಾಗಿ ರೂಪಾಲಿ ಎಸ್.ನಾಯ್ಕ ಹೇಳಿದರು.