ಯಲ್ಲಾಪುರ: ತಾಲೂಕಿನ ಕಳಚೆ ಗ್ರಾಮಕ್ಕೆ ಕಳೆದ 35 ವರ್ಷದಿಂದ ಸಂಚರಿಸುತ್ತಿದ್ದ ಸಾರಿಗೆ ಬಸ್ (ಹಾಲ್ಟಿಂಗ್) ಸಮಯ ಬದಲಾವಣೆ ಮಾಡಿದ್ದನ್ನು ವಿರೋಧಿಸಿ ಸ್ಥಳೀಯರು ಸೋಮವಾರ ಬಸ್ ತಡೆದು ಅಸಮಾಧಾನ ಹೊರ ಹಾಕಿದ್ದಾರೆ.
ಕಳಚೆ ಗ್ರಾಮಕ್ಕೆ ಈ ಬಸ್ ಕಳೆದ 35 ವರ್ಷಗಳಿಂದಲೂ ಬೆಳಿಗ್ಗೆ 7.30ಕ್ಕೆ ಕಳಚೆಯಿಂದ ಯಲ್ಲಾಪುರಕ್ಕೆ ತೆರಳುತ್ತಿತ್ತು. ಇತ್ತೀಚಿನ ಕೆಲವು ದಿನದಿಂದ ಈ ಬಸ್ಸನ್ನು 6.30ಕ್ಕೆ ಯಲ್ಲಾಪುರಕ್ಕೆ ಬಿಡಲು ಪ್ರಾರಂಭಿಸಿದ್ದು, ಇದರಿಂದಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರಿಗೆ ಅನಾನುಕೂಲವಾಗಿದೆ. ಯಲ್ಲಾಪುರದಿಂದ ಕಳಚೆ ಗ್ರಾಮಕ್ಕೆ ಬರುತ್ತಿದ್ದ ಆರು ಬಸ್ಸುಗಳ ಸಂಖ್ಯೆಯನ್ನು ಮೂರಕ್ಕೆ ಇಳಿಸಲಾಗಿದ್ದು, ಇಲ್ಲಿಯ ಗ್ರಾಮಸ್ಥರು ತಾಲೂಕು ಕೇಂದ್ರ ಹಾಗೂ ಇನ್ನಿತರ ಕಡೆಗಳಲ್ಲಿ ತೆರಳದಂತಾಗಿದೆ.
ಈ ಎಲ್ಲ ಕಾರಣಕ್ಕಾಗಿ ಈ ಹಿಂದೆ ಸ್ಥಳೀಯರು ಸಾರಿಗೆ ಇಲಾಖೆ ಅಧಿಕಾರಿಗಳು, ತಹಶೀಲ್ದಾರ ಕಚೇರಿ, ಪೊಲೀಸ್ ಠಾಣೆ ಹಾಗೂ ಇನ್ನಿತರ ಸಂಬಂಧಿತ ಇಲಾಖೆಗಳಿಗೆ ತೆರಳಿ ಬಸ್ಸಿನ ಸಮಯವನ್ನು ಬದಲಾವಣೆ ಮಾಡಬಾರದು ಮತ್ತು ಹಿಂದೆ ಬರುತ್ತಿದ್ದ ಆರು ಬಸ್ಸುಗಳನ್ನು ಬಿಡುವಂತೆ ಮನವಿ ನೀಡಿದ್ದರು. ಆದರೂ ಕೂಡ ಸಾರಿಗೆ ಅಧಿಕಾರಿಗಳು ಸಾರ್ವಜನಿಕರ ಮನವಿಯನ್ನು ತಿರಸ್ಕರಿಸಿ ಬೆಳಿಗ್ಗೆ 6.30ಕ್ಕೆ ಬಸ್ಸನ್ನು ಬಿಡುತ್ತಿದ್ದು, ಈ ಬಸ್ಸಿನಿಂದ ಸಂಸ್ಥೆಗೆ ಆದಾಯವೂ ಆಗುತ್ತಿಲ್ಲ, ಇತ್ತ ಸಾರ್ವಜನಿಕರಿಗೂ ಅನಾನುಕೂಲತೆಯಾಗುತ್ತಿದೆ.
ಹೀಗಾಗಿ ಸೋಮವಾರ ಬಸ್ ತಡೆದು ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಬಸ್ ತಡೆದು ಪ್ರತಿಭಟಿಸಿರುವ ಕಾರಣಕ್ಕೆ ಯಾಲ್ಲಾಪುರದಿಂದ ಕಳಚೆಗೆ 9 ಗಂಟೆಗೆ ತೆರಳುವ ಬಸ್ಸನ್ನು ಓಡಿಸದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ನಿರ್ಧರಿಸಿದ್ದರು. ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಮಣಿದ ಅಧಿಕಾರಿಗಳು, ಸಂಸ್ಥೆಯ ಯಲ್ಲಾಪುರ ಘಟಕದ ಸಂಚಾರಿ ನಿಯಂತ್ರಕ ಪದ್ಮನಾಭ ರೇವಣಕರ ಅವರನ್ನು ಪ್ರತ್ಯೇಕ ಬಸ್ಸಿನಲ್ಲಿ ಕಳಚೆಗೆ ಕಳುಹಿಸಿ ಲಿಖಿತವಾಗಿ ಸ್ಥಳೀಯರ ಬಸ್ಸಿನ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಸ್ಥಳೀಯರು ತಡೆ ಹಿಡಿದಿದ್ದ ಸಾರಿಗೆ ಬಸ್ಸನ್ನು ಮರಳಿ ಯಲ್ಲಾಪುರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಈ ವೇಳೆ ಗ್ರಾ.ಪಂ ಸದಸ್ಯ ಗಜಾನನ ಭಟ್, ಸಹ್ಯಾದ್ರಿ ಕೋ- ಆಪ್ ಸೊಸೈಟಿ ಅಧ್ಯಕ್ಷ ಉಮೇಶ ಭಾಗ್ವತ, ಸಾಮಾಜಿಕ ಕಾರ್ಯಕರ್ತರಗಳಾದ ಜನಾರ್ಧನ ಹೆಬ್ಬಾರ್, ಹರೀಶ ಭಟ್, ಪ್ರಸನ್ನ ಹೆಗಡೆ, ಕುಪ್ಪು ಗೌಡ, ರಾಮಕೃಷ್ಣ ಗೌಡ, ರಾಮಕೃಷ್ಣ ಭಟ್ ಸೂದ್ರೆ, ವಜ್ರಳ್ಳಿ, ಯಲ್ಲಾಪುರ ಪ್ರೌಢಶಾಲೆ ಹಾಗೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.