ಸಿದ್ಧಾಪುರ: ಸರಕಾರ ಮತ್ತು ಜನಪ್ರತಿನಿಧಿಗಳ ದ್ವಂದ್ವ ನೀತಿಯಿಂದ ಅರಣ್ಯವಾಸಿಗಳು ಅತಂತ್ರವಾಗುವ ಭೀತಿಯಲ್ಲಿದ್ದಾರೆ. ಅರಣ್ಯ ಭೂಮಿ ಹಕ್ಕು ಅನುಷ್ಟಾನದಲ್ಲಿನ ಕಾನೂನಿನ ಜಟಿಲತೆಯನ್ನು ಮುಕ್ತಗೊಳಿಸಲು ಸರಕಾರ ಮತ್ತು ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಇಲ್ಲದಿದ್ದರೆ ಅರಣ್ಯವಾಸಿಗಳು ಅತಂತ್ರರಾಗುವರು ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಸಿದ್ದಪುರ ತಾಲೂಕಿನ, ದೊಡ್ಮನೆ ಗ್ರಾಮ ಪಂಚಾಯತ ಸಭಾಂಗಣದಲ್ಲಿ ಜರುಗಿದ ಅರಣ್ಯವಾಸಿಗಳ ಸಭೆಯನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದರು.
ಸರಕಾರದ ಮತ್ತು ಜನಪ್ರತಿಗಳ ಇಚ್ಛಾಶಕ್ತಿ ಕೊರತೆಯಿಂದ ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕು ಮರಿಚಿಕೆಯಾಗಿದೆ. ಅರಣ್ಯವಾಸಿಗಳ ಹೋರಾಟ ಅರಣ್ಯ ರೋಧನವಾಗಿದೆ ಎಂದು ಅವರು ಸರಕಾರದ ನೀತಿಯನ್ನು ಟೀಕಿಸಿದರು.
ಸಭೆಯಲ್ಲಿ ವಿನಾಯಕ ಗೌಡ , ವಿವೇಕ ಗೌಡ ನಿರೂಪಣೆಯನ್ನು ಮಾಡಿದರು. ಅಧ್ಯಕ್ಷತೆಯಲ್ಲಿ ವಿವೇಕ್ ಭಟ್ಟ ಗಡಿಹಿತ್ಲು ಮಾತನಾಡುತ್ತಾ ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಸರಕಾರ ಚಿಂತಿಸಬೇಕು. ಇಲ್ಲದಿದ್ದರೇ, ಉಗ್ರ ಹೋರಾಟ ಮಾಡುವದು ಅನಿವಾರ್ಯ ಎಂದರು. ಹಿರಿಯ ವಕೀಲ ಎಂ.ಡಿ ನಾಯ್ಕ, ಕೆ.ಟಿ ನಾಯ್ಕ ಕ್ಯಾದಗಿ ಸಭೆಯಲ್ಲಿ ಮಾತನಾಡಿದರು. ವೇದಿಕೆಯ ಮೇಲೆ ಧುರೀಣರಾದ ಚೌಡ ನಾಯ್ಕ, ಬಿಡಿ ನಾಯ್ಕ ಕುರಿಗೆ ತೋಟ, ರಘುನಾಥ ನಾಯ್ಕ ಕ್ಯಾದಗಿ ಮುಂತಾದವರು ಉಪಸ್ಥಿತರಿದ್ದರು.
ಸಂಘಟಿತ ಹೋರಾಟಕ್ಕೆ ನಿರ್ಧಾರ: ಅರಣ್ಯವಾಸಿಗಳ ಹಿತ ಕಾಪಾಡುವ ದಿಶೆಯಲ್ಲಿ ಸಂಘಟಿತ ಹೋರಾಟ ಅನಿವಾರ್ಯ ಈ ದಿಶೆಯಲ್ಲಿ ಅರಣ್ಯವಾಸಿಗಳು ಭೂಮಿ ಹಕ್ಕಿಗಾಗಿ ಸಂಘಟಿತ ಹೋರಾಟಕ್ಕೆ ಸನ್ನದ್ಧರಾಗಬೇಕೆಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.