ಯಲ್ಲಾಪುರ: ಪೌರಕಾರ್ಮಿಕರೇ ಪಟ್ಟಣ ಪಂಚಾಯಿತಿಯ ತಳಹದಿಯಾಗಿದ್ದಾರೆ. ಅವರು ಸರಿಯಾಗಿ ಸೇವೆ ಸಲ್ಲಿಸದೇ ಪ್ರಾಮಾಣಿಕ ಕರ್ತವ್ಯ ನಿಭಾಯಿಸದೆ ಇದ್ದರೆ ಪಟ್ಟಣ ಪಂಚಾಯಿತಿ ಹಾಗೂ ನಗರಗಳು ಜನವಾಸ್ತವ್ಯ ಮಾಡುವುದು ಕಷ್ಟವಾಗುತ್ತಿತ್ತು. ಅವರ ಸೇವೆಯನ್ನು ಗುರುತಿಸಿರುವ ಸರ್ಕಾರ ಸರ್ಕಾರದ ಮಟ್ಟದಲ್ಲಿ ಪೌರಕಾರ್ಮಿಕರ ದಿನಾಚರಣೆ ಎಂದು ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಅವರು ಶುಕ್ರವಾರ ಮಧ್ಯಾಹ್ನ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಪೌರ ಕಾರ್ಮಿಕರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳಿಗೆ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು. ಯಲ್ಲಾಪುರ ಪಟ್ಟಣ ಪಂಚಾಯತಿಯಲ್ಲಿ ಬಹಳಷ್ಟು ಜನ ಪೌರಕಾರ್ಮಿಕರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕಾಯಂ ಗೊಳಿಸಲು ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಶಾಮಿಲಿ ಪಾಟಣಕರ ಮಾತನಾಡಿ, ಪೌರಕಾರ್ಮಿಕರು ಎರಡು ದಿನ ಕೆಲಸ ನಿಲ್ಲಿಸಿದರೇ ಪಟ್ಟಣ ನಗರಗಳ ಸ್ಥಿತಿ ಏನಾಗಬೇಡ, ಹೀಗಾಗಿ ಅವರ ಕೆಲಸವನ್ನು ನಗಣ್ಯದಿಂದ ಕಾಣದೇ ಗೌರವದಿಂದ ಕಾಣಬೇಕೆಂದು ಹೇಳಿದರು.
ಮುಖ್ಯಾಧಿಕಾರಿ ಸಂಗನಬಸಯ್ಯ ಮಾತನಾಡಿದರು. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಆಧಿತ್ಯ ಗುಡಿಗಾರ, ಸದಸ್ಯರುಗಳಾದ ರವಿ ಪಾಟಣಕರ, ಸಯ್ಯದ ಕೇಶರಲಿ, ಕಲ್ಪನಾ ನಾಯ್ಕ, ಪುಷ್ಪಾ ನಾಯ್ಕ, ನಾಗರಾಜ ಅಂಕೋಲೇಕರ, ರಾಜು ನಾಯ್ಕ, ರಾಧಾಕೃಷ್ಣ ನಾಯ್ಕ, ನಾಮ ನಿರ್ದೇಶಿತ ಸದಸ್ಯ ಶ್ರೀನಿವಾಸ ಗಾಂವ್ಕರ ವೇದಿಕೆಯಲ್ಲಿದ್ದರು.
ಪೌರಕಾರ್ಮಿಕ ದ್ಯಾಮಣ್ಣ ಹರಿಜನ್ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ಅಧಿಕಾರಿ ಹೇಮಾವತಿ ಭಟ್ ನಿರೂಪಿಸಿದರು. ಪೌರ ಕಾರ್ಮಿಕ ಲಕ್ಷ್ಮಣ ಹರಿಜನ್ ಕೊನೆಯಲ್ಲಿ ವಂದಿಸಿದರು. ಪೌರಕಾರ್ಮಿಕರು ಹಾಗೂ ಪಟ್ಟಣ ಪಂಚಾಯತಿಯ ಸಿಬ್ಬಂದಿಗಳಿಗಾಗಿ ಕಬ್ಬಡ್ಡಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ವೇದಿಕೆಯಲ್ಲಿದ್ದ ಅಧ್ಯಕ್ಷರು ಬಹುಮಾನಗಳನ್ನು ವಿತರಿಸಿದರು. ವೇದಿಕೆಯಲ್ಲಿ ಅನೇಕ ಜನ ಪೌರಕಾರ್ಮಿಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಜಿ.ಎನ್.ಗಾಂವ್ಕರ, ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ, ಸದಸ್ಯರಾದ ಚಂದು ಮಡಾಕರ್, ಸೋಮು ನಾಯ್ಕ ಯುವ ಮೋರ್ಚಾ ವತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನಿಸಿದರು.