ಹೊನ್ನಾವರ: ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ತುರ್ತು ಚಿಕಿತ್ಸೆಗಾಗಿ ತಾಲೂಕಿಗೆ ನೀಡಿದ ವಾಹನ ಕಾರ್ಯಾರಂಭಕ್ಕೆ ಒತ್ತಾಯ ಕೇಳಿಬಂದಿದೆ.
ತಾ.ಪಂ. ಆವರದಲ್ಲಿ ಕಳೆದ ಮೂರು ತಿಂಗಳಿನಿಂದ ನಿಂತಿರುವ ಕೇಂದ್ರ ಪುರಸ್ಕೃತ ಯೋಜನೆಯಾದ ಸಂಚಾರಿ ತುರ್ತು ಚಿಕಿತ್ಸಾ ವಾಹನ ರಾಜ್ಯದ ಎಲ್ಲೆಡೆಯಂತೆ ತಾಲೂಕಿಗೂ ಆಗಮಿಸಿತ್ತು. ಆದರೆ ಆಗಮಿಸಿ ಮೂರು ತಿಂಗಳು ಕಳೆದರೂ ಈ ವಾಹನ ಸೇವೆ ನೀಡಲು ಇದುವರೆಗೂ ಆರಂಭಿಸಿಲ್ಲ. ಲಕ್ಷಗಟ್ಟಲೆ ಹಣ ನೀಡಿ ಖರಿದೀಸಿದ ಈ ವಾಹನ ಕಳೆದ ಮೂರು ತಿಂಗಳಿನಿಂದ ತಾ.ಪಂ. ಆವಾರದಲ್ಲೆ ನಿಂತಿದ್ದು, ಮಳೆ- ಬಿಸಿಲು ಎನ್ನದೆ, ಸೇವೆ ಆರಂಭಿಸುವ ಮುನ್ನವೇ ತುಕ್ಕು ಹಿಡಿಯುತ್ತಿದೆ. ಸಹಾಯವಾಣಿ ಸಂಖ್ಯೆ 1962 ಗೆ ಕರೆ ಮಾಡಿದರೆ ಚಾಲಕರ ನಿಯೋಜನೆ ಆಗಿಲ್ಲ ಎನ್ನುವ ಉತ್ತರ ಬರುತ್ತಿದೆ. ವಾಹನ ನೀಡಿ ಮೂರು ತಿಂಗಳಾದರೂ ಚಾಲಕರ ನಿಯೋಜನೆ ಆಗಿಲ್ಲ ಎಂದಾದರೆ ಈ ಯೋಜನೆ ಆರಂಭಿಸುವ ಪೂರ್ವಾಪರ ವಿಚಾರಿಸದೇ ಜಾರಿಗೆ ತಂದು ವಾಹನ ಖರಿದಿಸಿದರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ತಾಲೂಕಿಗೆ ಸರ್ಕಾರದಿಂದ ಬರುವ ಇಂತಹ ತುರ್ತು ವಾಹನ ಬಂದಾಗ ಸದ್ಬಳಕೆ ಆಗಲು ಅಧಿಕಾರಿಗಳು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿ, ಕೂಡಲೆ ಚಾಲಕರ ನಿಯೋಜಿಸಿ ತುರ್ತು ನೆರವಿನ ಸೇವೆ ನೀಡಬೇಕಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈಗಲಾದರೂ ಎಚ್ಚೆತ್ತು ಚಾಲಕರ ನಿಯೋಜನೆಗೊಳಿಸಿ ಚಾಲನೆ ನೀಡಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಕೋಟ್…
ಕಳೆದ ಮೂರು ತಿಂಗಳ ಹಿಂದೆ ಆಗಮಿಸಿದ ವಾಹನಕ್ಕೆ ಚಾಲಕರ ನಿಯೋಜನೆ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಸರ್ಕಾರ ಏನು ಮಾಡುತ್ತಿದೆ. ಗೋವಿನ ಹೆಸರಿನಲ್ಲಿಯೂ ರಾಜಕಾರಣ ಮಾಡಿ ಇಂತಹ ವಾಹನ ಖರೀದಿಸಿ ಭ್ರಷ್ಟಾಚಾರ ಮಾಡಲು ಜನಪ್ರತಿನಿಧಿಗಳು ಅಧಿಕಾರಿಗಳು ಮುಂದಾದರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಚಾಲಕರ ನಿಯೋಜನೆ ಮಾಡಲು ಸಾಧ್ಯವಾಗಿಲ್ಲ ಎಂದಾದರೆ ಈ ವಾಹನ ವಾಪಸ್ಸು ತೆಗೆದುಕೊಂಡು ಹೋಗಿ. ಜನರ ತೆರಿಗೆ ಹಣ ಪೋಲಾಗುವುದು ಬೇಡ.
· ಮಂಜುನಾಥ ಗೌಡ, ಕರವೇ ತಾಲೂಕು ಅಧ್ಯಕ್ಷ