Slide
Slide
Slide
previous arrow
next arrow

ವಿಘ್ನೇಶ ಕೂರ್ಸೆಗೆ ಬಾಲ ಪುರಸ್ಕಾರ,ಡಾ.ವೆಂಕಟರಮಣ ಹೆಗಡೆ, ಡಿಎಸ್‌ಪಿ ಸುಧೀರ್‌ಗೆ ‘ನಮ್ಮನೆ’ ಪ್ರಶಸ್ತಿ

300x250 AD

ಶಿರಸಿ: ಕಳೆದ ಹನ್ನೊಂದು ವರ್ಷದಿಂದ ನಿರಂತರ ನಡೆಸಲಾಗುತ್ತಿರುವ ನಮ್ಮನೆ ಹಬ್ಬದಲ್ಲಿ ನೀಡಲಾಗುವ ನಮ್ಮನೆ ಪ್ರಶಸ್ತಿ ಹಾಗೂ ಬಾಲ ಪುರಸ್ಕಾರ ಪ್ರಕಟವಾಗಿದ್ದು, ಈ ಬಾರಿ ನಾಡಿನ ಹೆಸರಾಂತ ವೈದ್ಯ, ಅಂಕಣಕಾರ ಶಿರಸಿಯ ಡಾ. ವೆಂಕಟರಮಣ ಹೆಗಡೆ, ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ ಹಾಗೂ ಗೋಕರ್ಣದ ಬಾಲ ಕಲಾವಿದ ವಿಘ್ನೇಶ ಕೂರ್ಸೆಗೆ ಬಾಲ ಪುರಸ್ಕಾರ ಪ್ರಕಟವಾಗಿದೆ.
ಡಿಸೆಂಬರ್ ಎರಡನೇ ವಾರ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನಡೆಸುವ ನಮ್ಮನೆ ಹಬ್ಬದಲ್ಲಿ ಈ ಪ್ರಶಸ್ತಿಗಳನ್ನು ಗಣ್ಯರು ಪ್ರದಾನ ಮಾಡಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ತಿಳಿಸಿದ್ದಾರೆ.

ನಿಸರ್ಗ ವೈದ್ಯ: ಡಾ. ವೆಂಕಟರಮಣ ಹೆಗಡೆ ಅವರು ನಿಸರ್ಗ ಚಿಕಿತ್ಸೆ ಜನಪ್ರಿಯ ಇಲ್ಲದ ಕಾಲದಲ್ಲೇ ನಿಸರ್ಗ ಚಿಕಿತ್ಸೆಯ ಪದವಿ ಪಡೆದು ಚಾರಿಟೇಬಲ್ ಟ್ರಸ್ಟ್ ಮೂಲಕ ತವರು ಊರಿನಲ್ಲೇ ಆಸ್ಪತ್ರೆಯನ್ನೂ ಸ್ಥಾಪಿಸಿ ಈಗ ನಿಸರ್ಗ ಮನೆಯನ್ನೂ ನಡೆಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ರೋಗಿಗಳಿಗೂ ಚಿಕಿತ್ಸೆ ನೀಡಿ, ನಿರೋಗಿಯಾಗಿ ಬದುಕುವದನ್ನೂ ಕಲಿಸುವ ಕೈಂಕರ್ಯ ಮಾಡುತ್ತಿದ್ದಾರೆ. ನಿಸರ್ಗ ಚಿಕಿತ್ಸೆ, ಆಹಾರ ಪದ್ಧತಿ, ವ್ಯಾಯಾಮ, ದಿನಚರಿಯ ಪಾಠದ ಮೂಲಕ ನಿರಂತರ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ.
ದೇಶದಾದ್ಯಂತ ಯೋಗ ಕುರಿತು ಜಾಗೃತಿ ಮೂಡಿಸಿರುವ ಡಾ. ಹೆಗಡೆ ಅವರು ವಿವಿಧ ದೂರದರ್ಶನ ವಾಹಿನಿಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ 1200ಕ್ಕೂ ಅಧಿಕ ಅಂಕಣ ಬರಹ ನೀಡಿ ಎಂಟಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಈ‌ ಮೂಲಕ ವೈದ್ಯಕೀಯ ಸಾಹಿತ್ಯಕ್ಕೂ ಅನವರತ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನೋಬೆಲ್ ಮ್ಯಾನ್ ಅವಾರ್ಡ, ಆರ್ಯಭಟ ಪ್ರಶಸ್ತಿ, ಪರಿಮಳ ಅವಾರ್ಡ, ಇಂಡಿಯನ್ ಸ್ಟಾರ್ ಸಾಗಾ ಅವಾರ್ಡ ಕೂಡ ಅರಸಿ ಬಂದಿದೆ. ನಿಸರ್ಗ ವೈದ್ಯ ಎಂದೇ ಹೆಸರಾಗಿದ್ದಾರೆ.

ಧೀರ ಸುಧೀರ: ಪ್ರಾಮಾಣಿಕತೆ, ಬದ್ಧತೆಯ ಮೂಲಕ ಹೆಸರು ಮಾಡಿ ಸಿಎಂ, ರಾಷ್ಟ್ರಪತಿ ಪದಕವನ್ನೂ ಪಡೆದಿರುವ ಪೊಲೀಸ್ ಅಧಿಕಾರಿ ಸುಧೀರ್ ಹೆಗಡೆ ಅವರು ತಮ್ಮ ಕಾರ್ಯಶೈಲಿಯ ಮೂಲಕ ಹೆಸರು ಮಾಡಿದವರು. ಧೀರ ಸುಧೀರ ಎಂದೇ ಜನಪ್ರಿಯರೂ ಆಗಿದ್ದಾರೆ.
ಮಡಿವಾಳದ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ರಾಜ್ಯ ಮಾನವ ಹಕ್ಕು ಆಯೋಗದ ಡಿಎಸ್‌ಪಿಯಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ಹುಲೇಮಳಗಿಯ ಸುಧೀರ ಹೆಗಡೆ ನಿಷ್ಠಾವಂತ ಹಾಗೂ ದಿಟ್ಟ ಪೊಲೀಸ್ ಅಧಿಕಾರಿಯಾಗಿದ್ದಾರೆ.
1996ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಸೇವೆ ಆರಂಭಿಸಿದ ಅವರು, ವಿವಿಧ ಹುದ್ದೆಗಳಲ್ಲಿ ಗುಲಬುರ್ಗ, ಯಾದಗಿರಿ, ದಾವಣಗೆರೆ, ಕಾರವಾರ, ಚಿಕ್ಕಮಗಳೂರು, ಮಂಗಳೂರುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭೀಮಾ ತೀರದ ಹಂತಕ ಚಂದ್ರಪ್ಪ ಹರಿಜನ ತಂಡವನ್ನು ಎನ್‌ಕೌಂಟರ್ ಮಾಡಿದ ಸುಧೀರ ಹೆಗಡೆ, ಲಸ್ಕರ ಇ ತೋಯಿಬಾ ಭಯೋತ್ಪಾದಕರನ್ನೂ ಮಟ್ಟ ಹಾಕುವಲ್ಲಿ ಶ್ರಮಿಸಿದವರು. ನಕಲಿ ಅಂಕ ಪಟ್ಟಿ ಜಾಲವನ್ನೂ ಸದೆ ಬಡಿಯುವಲ್ಲಿ ಎದೆ ಒಡ್ಡಿದವರು. ಮಡಿವಾಳದ ಎಸಿಪಿಯಾಗಿದ್ದಾಗ ಕೇವಲ ನಾಲ್ಕು ವರ್ಷಗಳಲ್ಲಿ 8.48 ಕೋ.ರೂ. ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡು ಹಲವರನ್ನು ಜೈಲಿಗೆ ಕಳುಹಿಸಿದ್ದರು.
ಹೆಗಡೆ ಅವರಿಗೆ 2002ರಲ್ಲಿ ಮುಖ್ಯಮಂತ್ರಿ ಪದಕ, 2017ರಲ್ಲಿ ರಾಷ್ಟ್ರಪತಿ ಪದಕ, 2019ರಲ್ಲಿ ಸ್ವರ್ಣವಲ್ಲೀ ಮಠದಿಂದ ಸುರಕ್ಷಾ ಸುಧೀರ, 2021ರಲ್ಲಿ ಯುನಿಯನ್ ಹೋಂ ಮಿನಿಸ್ಟರ್ ಪದಕಗಳೂ ಅರಸಿ ಬಂದಿವೆ.

300x250 AD

ಇಲ್ಲಿ ತಟ್ಟೆಯೂ ವಾದನ: ಚಹಾ ಕುಡಿಯುವ ತಟ್ಟೆಯನ್ನೇ ಬಳಸಿ ಪದ್ಯ‌ ನುಡಿಸುವ ಅಪರೂಪದ ಬಾಲ ಕಲಾವಿದ ಗೋಕರ್ಣದ ಬಾಲಕ ವಿಘ್ನೇಶ ಜಿ ಕೂರ್ಸೆಗೆ ನಮ್ಮನೆ ಬಾಲ ಪುರಸ್ಕಾರ ನೀಡಲಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ನಾಡಿನ ಹಲವಡೆ ಪ್ರದರ್ಶನ ನೀಡಿದ ವಿಘ್ನೇಶ, ಗೋಕರ್ಣದ ವಿಷ್ಣುಗುಪ್ತ ವಿಶ್ವ ವಿದ್ಯಾಲಯದಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ. ಲೋಹ ತರಂಗ ವಾದನದ‌ ಮೂಲಕ ರಾಜ್ಯದ ಗಮನ ಸೆಳೆದ ಪ್ರತಿಭೆ ವಿಘ್ನೇಶನಾಗಿದ್ದು, ಸ್ವರಶ್ರೀ, ಹವ್ಯಕ ಪಲ್ಲವ ಪುರಸ್ಕಾರವೂ ಬಂದಿದೆ. ಉದಯ ಟಿವಿಯ ಕಿಲಾಡಿ ಕಿಡ್ಸ, ಮಜಾ ಟಾಕೀಸ್‌ನಲ್ಲೂ ಪ್ರದರ್ಶನ ನೀಡಿದ್ದಾನೆ. ಅಪ್ಪ ಗಣಪತಿ ಕೂರ್ಸೆ ಕೂಡ ಕಲಾವಿದರಾಗಿದ್ದು, ಅನೇಕ ವೇದಿಕೆಗಳಲ್ಲಿ ಇಬ್ಬರೂ ಕಾರ್ಯಕ್ರಮ ನೀಡಿದ್ದಾರೆ ಎಂಬುದು‌ ಉಲ್ಲೇಖನೀಯ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top