ಯಲ್ಲಾಪುರ: ಪಟ್ಟಣದ ಯಲ್ಲಾಪುರ ಅರ್ಬನ್ ಕೋ- ಆಪ್ ಕ್ರೆಡಿಟ್ ಸೊಸೈಟಿಯ 25ನೇ ವಾರ್ಷಿಕ ಸಾಮಾನ್ಯ ಸಭೆ ಬುಧವಾರ ಪಟ್ಟಣದ ಲಕ್ಷ್ಮೀನಾರಾಯಣ ವೆಂಕಟರಮಣ ಮಠದ ಸಭಾಭವನದಲ್ಲಿ ನಡೆಯಿತು.
ಸೊಸೈಟಿಯ ಅಧ್ಯಕ್ಷ ಪರಶುರಾಮ ಆಚಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸೈಟಿಯು ಎಲ್ಲ ವ್ಯವಹಾರದಿಂದ 74 ಲಕ್ಷ 91 ಸಾವಿರ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಅಡಿಟ್ ನಲ್ಲಿ ಎ ವರ್ಗಿಕರಣದಲ್ಲಿ ಮುಂದುವರಿದಿದೆ. ಶೇರು ಬಂಡವಾಳ 2 ಕೋಟಿ 32ಲಕ್ಷ ರೂಪಾಯಿ, ಸಂಘವು ಸದಸ್ಯರಿಂದ 47 ಕೋಟಿ 25 ಲಕ್ಷ ಠೇವಣಿ ಸಂಗ್ರಹಿಸಿದ್ದು, ದುಡಿಯುವ ಬಂಡವಾಳ 53 ಕೋಟಿ 44 ಲಕ್ಷ ರೂಪಾಯಿ, ಕಾಯ್ದಿಟ್ಟ ನಿಧಿ 1 ಕೋಟಿ 42 ಲಕ್ಷ ರೂಪಾಯಿ ಇದೆ. ಇತರೇ ನಿಧಿ 1 ಕೋಟಿ 68 ಲಕ್ಷ ರೂಪಾಯಿ ಇದ್ದು, 34 ಕೋಟಿ 87 ಲಕ್ಷ ರೂಪಾಯಿ ಸದಸ್ಯರಿಗೆ ಸಾಲ ನೀಡಲಾಗಿದೆ ಎಂದು ವಾರ್ಷಿಕ ಪ್ರಗತಿಯ ಮಾಹಿತಿ ನೀಡಿದರು.
23-12-1997 ರಂದು ಕಾರ್ಯಾರಂಭ ಮಾಡಿದ ಸಂಘವು 23-12-2022ಕ್ಕೆ 25 ವರ್ಷಗಳನ್ನು ಪೂರೈಸುತ್ತಿದ್ದು, ಈ ವರ್ಷ ಬೆಳ್ಳಿ ಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಸಂಘದ ಯಶಸ್ಸಿಗೆ ಸಹಕರಿಸಿದ ಶೇರುದಾರ ಸದಸ್ಯರನ್ನು, ಆಡಳಿತ ಮಂಡಳಿಯ ಈ ಹಿಂದಿನ ಎಲ್ಲಾ ಸದಸ್ಯರನ್ನು, ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಾಹಕರು ಮತ್ತು ಇಲಾಖಾ ಅಧಿಕಾರಿಗಳ ಸಹಕಾರವನ್ನು ಈ ಸಂಧರ್ಬದಲ್ಲಿ ಅವರು ಸ್ಮರಿಸಿದರು. ನಂತರ ಬೆಳ್ಳಿ ಹಬ್ಬದ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ನಿರ್ದೇಶಕರುಗಳಾದ ಸುಶೀಲಾ ಬಾಂದೇಕರ ಸ್ವಾಗತಿಸಿದರು, ಎನ್ ವಿ ಸಭಾಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಧೀರ್ ಕೋಡ್ಕಣಿ ನಿರೂಪಿಸಿದರು, ಪ್ರಧಾನ ವ್ಯವಸ್ಥಾಪಕರಾದ ರಾಜೇಂದ್ರ ಭಟ್ಟ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ನಾರಾಯಣ ಕೆ.ಭಟ್ಟ, ನಿರ್ದೇಶಕರುಗಳಾದ ಪ್ರಕಾಶ ಭಡಂಗಕರ, ಸುರೇಶ್ ಅಣ್ವೇಕರ, ಜನಾರ್ಧನ ಚಹ್ವಾಣ, ನಾರಾಯಣ ನಾಯಕ, ಸುಬ್ರಾಯ ಜಿ.ಭಟ್ಟ, ಶಿವರಾಮ ಹೆಗಡೆ, ಪಂಚಾಕ್ಷರಿ ಹಿರೇಮಠ, ನಂದಿನಿ ಎನ್.ಭಟ್ಟ ಇದ್ದರು.