ದಾಂಡೇಲಿ: ಕಳೆದ ಆರು ವರ್ಷಗಳಿಂದ ತನ್ನ ಗತವೈಭವದಿಂದ ಹಿಂದೆ ಸರಿದಿದ್ದ ದಾಂಡೇಲಿಯ ರಾಮಲೀಲೋತ್ಸವ ಆಚರಣೆಗೆ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ ಮತ್ತೆ ಮುಂದಡಿ ಇಟ್ಟಿದ್ದು, ಸ್ಥಳೀಯರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.
ಇಡೀ ಉತ್ತರ ಕರ್ನಾಟಕದ ಭಾಗದಲ್ಲೆ ಅದ್ಧೂರಿ ದಸರಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ರಾಮಲೀಲೋತ್ಸವ, ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯಿಂದ ಡಿಲಕ್ಸ್ ಮೈದಾನದಲ್ಲಿ ನಡೆಯುತ್ತಿತ್ತು. ಆದರೆ ಕೋವಿಡ್‌ನಿಂದಾಗಿ, ಅದಕ್ಕೂ ಪ್ರಮುಖವಾಗಿ ಕೆ.ಎಲ್.ಚಂಡಕ್ ಅವರು ನಿವೃತ್ತರಾದ ಬಳಿಕ ಈ ಅದ್ಧೂರಿ ಸಂಭ್ರಮಕ್ಕೆ ಬದಲಾವಣೆ ನೀಡಲಾಗಿತ್ತು.
ಆದರೆ ಕಳೆದ ವರ್ಷ ಕಾಗದ ಕಾರ್ಖಾನೆಯ ಮಾಲಕರು ದಾಂಡೇಲಿಗಾಗಮಿಸಿದ್ದ ಸಂದರ್ಭ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಸೆಂಟರ್ ಲೋಕಾರ್ಪಣೆ ಸಮಾರಂಭದಲ್ಲಿ ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್ ಅವರು ರಾಮಲೀಲೋತ್ಸವವನ್ನು ಈ ಹಿಂದಿನಂತೆ ಸಂಭ್ರಮ, ಸಡಗರ ಹಾಗೂ ಅದ್ಧೂರಿಯಾಗಿ ಮಾಡಬೇಕೆಂದು ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಕಾರ್ಖಾನೆಯ ಮಾಲಕರು, ವೇದಿಕೆಯಲ್ಲಿ ಸೈ ಎಂದು ಸಕರಾತ್ಮಕವಾಗಿ ಸ್ಪಂದಿಸಿದ್ದರು. ಹೀಗಾಗಿ ಈ ಬಾರಿ ರಾಮಲೀಲೋತ್ಸವ ಆಚರಣೆಗೆ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆ ಮುಂದಾಗಿದೆ ಎಂಬುದು ತಿಳಿದುಬಂದಿದೆ. ಇದು ಜನತೆಯಲ್ಲಿ ಸಂತಸ ಇಮ್ಮಡಿಗೊಳಿಸಿದೆ.