ಹೊನ್ನಾವರ: ತಾಲೂಕಿನ ಕಡತೋಕ ವ್ಯವಸಾಯ ಸೇವಾ ಸಹಕಾರಿ ಸಂಘವು 2021- 22ನೇ ಸಾಲಿನಲ್ಲಿ 12 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾಹಿತಿ ನೀಡಿದರು.
ಕಡತೋಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಘವು ಕಡತೋಕ ಮತ್ತು ನವಿಲಗೋಣ ಗ್ರಾ.ಪಂ. ವ್ಯಾಪ್ತಿಯಲ್ಲಿ ವ್ಯವಹರಿಸುತ್ತಿದ್ದು, 5.20 ಕೋಟಿ ಕೃಷಿ ಸಾಲ ವಿತರಿಸಿದ್ದು, ಕೃಷಿಯೇತರ ಸಾಲ 4.14 ಕೋಟಿ ವಿತರಿಸಿದೆ. ಕೃಷಿಯೇತರ ಸಾಲಗಳಾದ ವಾಹನ ಸಾಲ, ಓವರ್ ಡ್ರಾಫ್ಟ್ ಸಾಲ, ವಾಸ್ತವ್ಯ ಮನೆ, ಮನೆ ದುರಸ್ಥಿ ಸಾಲ, ಸ್ವ-ಉದೋಗ ಸಾಲ, ಕೈಗಾರಿಕಾ ಸಾಲ, ಬಂಗಾರ ದಾಗಿನೆ ಸಾಲ ಹಾಗೂ ಇತ್ಯಾದಿ ಸಾಲಗಳನ್ನು ಸದಸ್ಯರಿಗೆ ತೃಪ್ತಿಕರವಾಗಿ ವಿತರಿಸಿದ್ದು ಸಾಲ ವಸೂಲು ಕೂಡ ತೃಪ್ತಿಕರವಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಎಸ್.ಎನ್.ಭಟ್ಟ ಮೇಲಿನಮಠ, ಸಂಘವು ಅಡಿಕೆ ವ್ಯಾಪಾರವನ್ನು ಪುನರಾರಂಭಿಸಬೇಕೆಂದು ಮತ್ತು ಗೊಬ್ಬರ ವಿತರಣೆಯನ್ನು ಹೆಚ್ಚಿಸಬೇಕೆಂದು ತಿಳಿಸಿದರು. ಗೊಬ್ಬರ ವಿತರಣೆ ನಮ್ಮ ಬೇಡಿಕೆಯಂತೆ ಸರ್ಕಾರದಿಂದ ಸಕಾಲದಲ್ಲಿ ಪೂರೈಕೆ ಆಗುತ್ತಿಲ್ಲ ಎಂದು ಮುಖ್ಯ ಕಾರ್ಯನಿರ್ವಾಹಕ ಗುರುಪ್ರಸಾದ ಭಟ್ಟ ಇವರು ಸಭೆಯ ಗಮನಕ್ಕೆ ತಂದರು.
ಅಡಿಕೆ ಮತ್ತು ಭತ್ತದ ಬೆಳೆಗಳು ಅತಿವೃಷ್ಟಿಯಿಂದಾಗಿ ಹಾಳಾಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಸಂಘವು ಕೂಡಲೇ ಸರ್ಕಾರದ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ತಿಳಿಸಿದರು. ಅನೇಕ ಕೃಷಿ ಭೂಮಿಗಳು ಬೆಳೆ ಬೆಳೆಯಲಿಕ್ಕೆ ಸಾದ್ಯವಾಗದೇ ಇರುವುದರಿಂದ ರೈತರಿಗೆ ತುಂಬಾ ತೊಂದರೆ ಆಗಿದೆ ಇದಕ್ಕೆ ಸಂಘದ ವತಿಯಿಂದ ಬೇಸಾಯ ಸಡೆಸಲು ಎಸ್.ಎಮ್.ಭಟ್ಟ ಅಗ್ನಿಹೋತ್ರಿ ಆಗ್ರಹಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಗುರುಪ್ರಸಾದ ಭಟ್ಟ ಸ್ವಾಗತಿಸಿ, ನಿರ್ದೇಶಕ ಶಂಕರ ಭಟ್ಟ ವಂದಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಮಚಂದ್ರ ನಾಯ್ಕ, ಸಂಘದ ನಿರ್ದೇಶಕರು ನವಿಲಗೋಣ ಗ್ರಾ.ಪಂ. ಅಧ್ಯಕ್ಷ ಸತೀಶ ಹೆಬ್ಬಾರ್, ನಿರ್ದೇಶಕರು, ಸಂಘದ ಶೇರುದಾರರು, ಸಿಬ್ಬಂದಿ ಉಪಸ್ಥಿತರಿದ್ದರು.