ದಾಂಡೇಲಿ: ಹಲವು ಸಾಧನೆಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಹರ್ಷಿ ಅರಬಿಂದೋ ಘೋಷ್ ರವರು ಆಧ್ಯಾತ್ಮ ಚಿಂತನೆ, ಯೋಗ, ಹೋರಾಟಗಳ ಜೊತೆಗೆ ಇಡೀ ದೇಶವನ್ನು ಒಂದಾಗಿಸುವ ಮನುಷ್ಯ ಪ್ರೀತಿಯ ಸಂದೇಶವನ್ನು ನೀಡಿದ್ದರು. ಅವರು ತಮ್ಮ ಬದುಕು ಮತ್ತು ಬರಹಗಳ ಮೂಲಕ ಬಿಟ್ಟುಹೋಗಿರುವ ಮಾನವತೆಯ ವಿಚಾರಗಳು ಮನೆಮನೆಗಳನ್ನು ತಲುಪುವಂತಾಗಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
ಅವರು ಬಂಗೂರನಗರದಲ್ಲಿರುವ ಅರಬಿಂದೋ ಧ್ಯಾನ ಮಂದಿರದಲ್ಲಿ ಶ್ರೀಅರಬಿಂದೋ ಧ್ಯಾನ ಮಂದಿರ ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀಅರಬಿಂದೋರ ನೂರೈವತ್ತನೇ ಜನ್ಮದಿನ ಆಚರಣೆ ಹಾಗೂ ಅರಬಿಂದೋರವರ ಕುರಿತಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಜ್ಯ ಅರಬಿಂದೋ ಸೊಸೈಟಿಯ ಕಾರ್ಯದರ್ಶಿ ಡಾ.ಎಸ್.ಕೆ.ಕೊಪ್ಪ ಮಾತನಾಡಿ, ರಾಜ್ಯದ ಹಲವಾರು ಪ್ರದೇಶಗಳಲ್ಲಿ ಅರಬಿಂದೋ ದ್ಯಾನ ಮಂದಿರಗಳು ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿಯಲ್ಲಿ ಏಕೈಕ ಧ್ಯಾನ ಮಂದಿರವಿದ್ದು, ಇದಕ್ಕೆ ಹಲವು ವರ್ಷಗಳ ಇತಿಹಾಸವಿದೆ ಎಂದರು.
ರಾಜ್ಯ ಅರಬಿಂದೋ ಸೊಸೈಟಿಯ ಸಂಯೋಜಕ ಡಾ.ಜಗದೀಶ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿದರು. ಬೆಳಗಾವಿಯ ಹಿರಿಯ ಸಾಧಕ ಡಾ.ಆರ್.ಎಸ್.ಗಾಂವಕರ ಉಪನ್ಯಾಸ ನೀಡಿದರು. ಅರಬಿಂದೋ ಸೊಸೈಟಿಯ ಘಟಕದ ಅಧ್ಯಕ್ಷ ಸಂತೋಷ ಅಣ್ವೇಕರ ಸ್ಥಳೀಯವಾಗಿ ಅರಬಿಂದೋ ಧ್ಯಾನಮಂದಿರದ ಬೆಳವಣಿಗೆಗೆ ಕಾಗದ ಕಂಪನಿಯ ಸಹಕಾರವನ್ನು ಸ್ಮರಿಸಿ, ನಗರದ ಪ್ರತಿಯೊಬ್ಬರೂ ಈ ಧ್ಯಾನಮಂದಿರದ ಬೆಳವಣಿಗೆಯಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿದ್ದ ನಗರಸಭಾ ಅಧ್ಯಕ್ಷೆ ಸರಸ್ವತಿ ರಜಪೂತ್, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ, ಧಾರವಾಡದ ಅರಬಿಂದೋ ಸೊಸೈಟಿ ಅಧ್ಯಕ್ಷ ಎ.ಬಿ.ದೇಸಾಯಿ, ಅರಬಿಂದೋ ಸೊಸೈಟಿಯ ದೀಪಕ್ ಡಿಸೋಜ, ಹಿರಿಯ ವೈದ್ಯ ಡಾ.ಎನ್ .ಜಿ.ಬ್ಯಾಕೋಡ, ಮಹರ್ಷಿ ಅರಬಿಂದೋರ ಕುರಿತಾಗಿ ಮಾತನಾಡಿ, ಪ್ರತಿಯೊಬ್ಬರೂ ಸಾತ್ವಿಕ ಬದುಕನ್ನು ಅನುಸರಿಸಬೇಕು ಎಂದರು.
ಸಮಾಜ ಸೇವಕ ದಿವಾಕರ ನಾಯ್ಕ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಅರಬಿಂದೋ ಧ್ಯಾನಮಂದಿರದ ರಾಹುಲ್ ಬನ್ಸೋಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ನಾಗೇಶ ಆರ್.ನಾಯ್ಕ್ ವಂದಿಸಿದರು. ಅರಬಿಂದೋ ಧ್ಯಾನ ಮಂದಿರದ ಕಾರ್ಯದರ್ಶಿ ಸಂದೀಪ ಗಾಂವಕರ, ಕೋಶಾಧ್ಯಕ್ಷ ಬಸವರಾಜ ಕಟಗಿ, ವಿಟ್ಟಲ್ ವಾಟ್ಲೇಕರ್, ಕಸಾಪ ಕಾರ್ಯದರ್ಶಿಗಳಾದ ಗುರುಶಾಂತ ಜಡೆಹಿರೇಮಠ, ಪ್ರವೀಣ ನಾಯ್ಕ್, ಕೋಶಾಧ್ಯಕ್ಷ ಶ್ರೀಮಂತ ಮದರಿ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಬಹುಮಾನ ವಿತರಣೆ: ಮಹರ್ಷಿ ಅರವಿಂದರ ಕುರಿತಾಗಿ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರತ್ಯೇಕವಾಗಿ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರದೊಂದಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾಲೇಜು ವಿಭಾಗದಲ್ಲಿ ಜನತಾ ವಿದ್ಯಾಲಯದ ಅಜಯಕುಮಾರ ಎಸ್.ಕೆ ಪ್ರಥಮ, ಸರಕಾರಿ ಪದವಿ ಕಾಲೇಜಿನ ಸಿಮ್ರನ ಕೆ.ಪಿ ದ್ವಿತೀಯ, ಬಂಗೂರ ನಗರ ಪದವಿ ಪೂರ್ವ ಕಾಲೇಜಿನ ಮಾನಸಾ ಬಿ.ವಾಸರೆ, ತೃತೀಯ ಹಾಗೂ ಪದವಿ ಕಾಲೇಜಿನ ವಿಶಾಲ ಗೋಗ್ಲಿ ಹಾಗೂ ರೂಪಾಲಿ ಬೇನೇಕರ ತೃತೀಯ ಬಹುಮಾನ ಪಡೆದುಕೊಂಡರು.
ಪ್ರೌಢಶಾಲಾ ವಿಭಾಗದಲ್ಲಿ ಸೇಂಟ್ ಮೈಕೆಲ್ ಪ್ರೌಢಶಾಲೆಯ ಅನನ್ಯ ವಿಷ್ಣುಮೂರ್ತಿ ರಾವ್ ಪ್ರಥಮ, ಕನ್ಯಾವಿದ್ಯಾಲಯದ ಸೋನಾಲಿ ಗೌಡ ದ್ವಿತೀಯ, ಜನತಾ ವಿದ್ಯಾಲಯದ ನಿಧಿ ನಾಯ್ಕ ತೃತೀಯ ಹಾಗೂ ಜನತಾ ವಿದ್ಯಾಲಯದ ಶೃದ್ಧಾ ಸಾಮಂತ, ಆರಾಧನಾ ಬಸವರಾಜ ಸಮಧಾನಕರ ಬಹುಮಾನ ಪಡೆದುಕೊಂಡರು.