ಶಿರಸಿ: ಮಕ್ಕಳ ರಂಗಭೂಮಿ ಪ್ರೋತ್ಸಾಹಿಸಲು ಅಕಾಡೆಮಿಯು ಇದೇ ಪ್ರಥಮ ಬಾರಿಗೆ ಮಕ್ಕಳ ನಾಟಕ ಸ್ಪರ್ಧೆ ಹಮ್ಮಿಕೊಂಡಿದೆ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಹೇಳಿದರು.
ಸೋಮವಾರ ಅವರು ತಾಲೂಕಿನ ಯಡಹಳ್ಳಿಯಲ್ಲಿ ಸ್ಥಳೀಯ ವಿದ್ಯೋದಯ ವಿದ್ಯಾಲಯದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಹಂತದ ನಾಟಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ರಂಗಭೂಮಿ ಹೇಗೆ ಇರಬೇಕು ಎಂಬ ಪುಸ್ತಕ ಬರೆದಿದ್ದು ಬಿಟ್ಟರೆ ಅಕಾಡೆಮಿ ಈವರೆಗೆ ಯಾವುದೇ ಮಕ್ಕಳ ನಾಟಕ ಅಥವಾ ಮಕ್ಕಳ ರಂಗ ಭೂಮಿಗೆ ಸ್ಪಂದಿಸಿಲ್ಲ. ಈ ವರ್ಷ ಮಕ್ಕಳ ರಂಗ ಭೂಮಿಗಾಗಿ ಅಕಾಡೆಮಿಯು ಆದ್ಯತೆಯಲ್ಲಿ ಕೆಲಸ ಮಾಡುತ್ತಿದೆ. ಈ ವರ್ಷದ ಪ್ರಥಮ ಕಾರ್ಯಕ್ರಮ ಇದಾಗಿದೆ. ನಾಟಕ ಅಕಾಡೆಮಿ ಗ್ರಾಮೀಣ ಭಾಗದಲ್ಲಿ ನಾಟಕದ ಮೂಲಕ ತಲುಪುವ ಪ್ರಯತ್ನ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ರಂಗಾಯಣಗಳು ಇವೆ. ರಂಗಾಯಣ ಆಯಾ ಭಾಗದಲ್ಲಿ ಕೆಲಸ ಮಾಡುತ್ತವೆ. ಅಕಾಡೆಮಿ ರಾಜ್ಯ ಮಟ್ಟದ ಕಾರ್ಯ ಮಾಡುತ್ತದೆ. ನಾಟಕ ಅಕಾಡೆಮಿಯು ಇಡೀ ರಾಜ್ಯದ ರಂಗಭೂಮಿಗೆ ಚೇತರಿಕೆ ನೀಡುವ ಕೆಲಸ ಮಾಡುತ್ತದೆ. ನಾಟಕೋತ್ಸವ, ತರಬೇತಿ, ಹಿರಿಯರಿಗೆ ಗೌರವ, ಹೊರ ನಾಡಿನಲ್ಲೂ ನಾಟಕ ನಡೆಸುತ್ತಿದೆ ಎಂದರು.
ರಂಗಕರ್ಮಿ ಚಂದ್ರು ಉಡುಪಿ,
ಡಯಟ್ ನ ಪ್ರಶಾಂತ ವೆರ್ಣೇಕರ್, ಎಂಎಸ್ಪಿ ಕಾರ್ಯದರ್ಶಿ ಎಂ.ವಿ.ಹೆಗಡೆ ಕಾನಗೋಡ, ಮುಖ್ಯಾಧ್ಯಾಪಕ ಕೆ.ಜಿ.ಭಟ್ಟ ಇತರರು ಇದ್ದರು. ಅಧ್ಯಕ್ಷತೆಯನ್ನು ಶ್ರೀಧರ ಹೆಗಡೆ ಮಶೀಗದ್ದೆ ಇತರರು ಇದ್ದರು. ರೂಪಾ ಕಡ್ನಮನೆ ನಿರ್ವಹಿಸಿದರು. ಅಕಾಡೆಮಿ ಸದಸ್ಯ ಗಣಪತಿ ಹಿತ್ಲಕೈ ಸ್ವಾಗತಿಸಿದರು.
ಅಕ್ಟೋಬರ್ 10, 11ರಂದು ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಬೆಂಗಳೂರಿನಲ್ಲಿ ನಡೆಯಲಿದೆ.
– ಪ್ರೊ.ಆರ್.ಭೀಮಸೇನ, ಅಧ್ಯಕ್ಷರು, ನಾಟಕ ಅಕಾಡೆಮಿ