ಯಲ್ಲಾಪುರ : ಇಂದಿನ ಆಧುನಿಕ ಯುಗದಲ್ಲಿ ಮಕ್ಕಳನ್ನು ಪಠ್ಯಕ್ಕಷ್ಟೆ ಸೀಮಿತವಾಗಿಸದೇ, ಪಠ್ಯದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ಪಾಲಕರು ಆಸಕ್ತಿ ತೋರಬೇಕು. ಇಂದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಬಹಳಷ್ಟು ವಿಫುಲ ಅವಕಾಶಗಳಿದ್ದು, ಮಕ್ಕಳ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್ ಸಭಾಭವನದಲ್ಲಿ ಶನಿವಾರ ಬೆಳಿಗ್ಗೆ ತಾಲೂಕಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಕಂಡ ಅಪ್ರತಿಮ ನಾಯಕ ಪ್ರಧಾನಿ ಜನ್ಮ ದಿನದ ಶುಭಾಶಯಗಳನನ್ನು ಹೆಬ್ಬಾರ್ ಅವರು ಕೋರಿದರು.
ವೈಟಿಎಸ್ಎಸ್ ಅಧ್ಯಕ್ಷ ರವಿಕುಮಾರ ಶಾನಭಾಗ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ನಮ್ಮ ಸಂಸ್ಥೆಯಲ್ಲಿ ಅನೇಕ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲು ಎಲ್ಲ ರೀತಿಯ ಸೌಲಭ್ಯಗಳು ಇದೆ, ಶಿಕ್ಷಣ ಇಲಾಖೆ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ವಹಿಸಿದ್ದರು, ವೇದಿಕೆಯಲ್ಲಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಉದ್ಯಮಿ ಬಾಲಕೃಷ್ಣ ನಾಯಕ, ಸಾಮಾಜಿಕ ಕಾರ್ಯಕರ್ತ ವಿಜಯ ಮಿರಾಶಿ, ವೈಟಿಎಸ್ಎಸ್ ಪ.ಪೂ ಕಾಲೇಜಿನ ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಜೇಯ ನಾಯಕ, ತಾಲ್ಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ನಾಯಕ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಆರ್ ಭಟ್ ವೈಟಿಎಸ್ಎಸ್ ಮುಖ್ಯ ಶಿಕ್ಷಕ ಎನ್ ಎಸ್ ಭಟ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಬಿಸಗೋಡ ಶಾಲೆಯ ಶಿಕ್ಷಕ ಎಸ್ ಬಿ ನಾಯಕ ಹಾಗೂ ಇಡಗುಂದಿ ವಿಶ್ವದರ್ಶನ ಶಾಲೆಯ ಶಿಕ್ಷಕ ವಿ.ಕೆ ಗಾಂವ್ಕರ ಅವರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ಆರ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕಗೈದರು. ವೈಟಿಎಸ್ಎಸ್ ಶಿಕ್ಷಕ ವಿನೋದ ಭಟ್ ನಿರೂಪಿಸಿದರು. ನಯನಾ ಮತ್ತು ಸಂಧ್ಯಾ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ವಂದಿಸಿದರು. ಇದೇ ವೇದಿಕೆಯಲ್ಲಿ ವಿಶ್ವ ಕರ್ಮ ಜಯಂತಿಯ ಪ್ರಯುಕ್ತ ವಿಶ್ವಕರ್ಮ ಭಾವಚಿತ್ರಕ್ಕೆ ಸಚಿವ ಶಿವರಾಮ ಹೆಬ್ಬಾರ್ ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.